ಮೆಟ್ರೋರಾಜ್ಯ

ದಲಿತ ಕವಿ ಡಾ. ಸಿದ್ದಲಿಂಗಯ್ಯ ನಿಧನ

ಬೆಂಗಳೂರು: ದಲಿತ ಕವಿ ಡಾ. ಸಿದ್ದಲಿಂಗಯ್ಯ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಕೊರೊನಾದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಇಂದು ಸಂಜೆ 4.45ರ ಸುಮಾರಿಗೆ ಸಿದ್ದಲಿಂಗಯ್ಯ ಅವರು ನಿಧನರಾಗಿದ್ದು, ಇಂದೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ 1954ರಲ್ಲಿ ಜನಿಸಿದ್ದ ಸಿದ್ಧಲಿಂಗಯ್ಯ, ದಲಿತ ಕವಿ ಎಂದೇ ಚಿರಪರಿಚಿತರಾಗಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವ ಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.

ಸಿದ್ದಲಿಂಗಯ್ಯನವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯ ರಚಿನೆ ಮಾಡಿದ್ದರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದರು. ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದರು.

ಸಿದ್ದಲಿಂಗಯ್ಯ ಬರವಣಿಗೆ:

ಹೊಲೆಮಾದಿಗರ ಹಾಡು ಅವರ ಮೊದಲ ಕವನಸಂಕಲನ. ಕನ್ನಡ ಕಾವ್ಯಲೋಕದಲ್ಲಿ ಹೊಸದೇ ಸಂವೇದನೆಯೊಂದರ ದಾಖಲೆ. ಮೆರವಣಿಗೆ, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು, ಅಲ್ಲೆ ಕುಂತವರೆ, ನನ್ನ ಜನಗಳು ಮತ್ತು ಇತರ ಕವಿತೆಗಳು ಮೊದಲಾದ ಕವನಸಂಕಲನಗಳು ದಲಿತ ಸಂವೇದನೆಯ ತೀವ್ರತೆಯನ್ನು ಪ್ರಕಟಿಸಿದ್ದವು.

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು, ದಲಿತರು ಬಂದರು ದಾರಿ ಬಿಡಿ ದಲಿತರ ಕೈಗೆ ರಾಜ್ಯ ಕೊಡಿ ಮೊದಲಾದ ಅವರ ಸಾಲುಗಳು ಕಾವ್ಯಪ್ರಿಯರ ಮನಸ್ಸೊಳಗೆ ಉಳಿದುಬಿಟ್ಟಿರುವಂಥವು.

ಗ್ರಾಮದೇವತೆಗಳ ಬಗ್ಗೆ ಅವರು ಮಹಾಪ್ರಬಂಧವನ್ನು ಬರೆದಿದ್ದರು.

ಊರು ಕೇರಿ ಎಂಬುದು ಅವರ ಆತ್ಮಕಥನ. ಎರಡು ಭಾಗಗಳಲ್ಲಿ ಅದು ಪ್ರಕಟವಾಗಿತ್ತು.

ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ, ನೃಪತುಂಗ, ಪಂಪ ಪ್ರಶಸ್ತಿ ಮೊದಲಾದ ಗೌರವಗಳು ಒಲಿದಿವೆ.

ಶ್ರವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button