ಮೆಟ್ರೋ

ಮೃತದೇಹ ಹಸ್ತಾಂತರಿಸಲು ಹಣಕ್ಕೆ ಬೇಡಿಕೆ; ಆಸ್ಪತ್ರೆ ಅಮಾನವೀಯ ನಡೆ

ಬೆಂಗಳೂರು : ಆಸ್ಪತ್ರೆಗಳಲ್ಲಿ ಮರಣ ಹೊಂದಿದವರ ಮೃತದೇಹವನ್ನು ಸಂತ್ರಸ್ತರಿಗೆ ಹಸ್ತಾಂತರಿಸಲು ಹಣಕ್ಕೆ ಒತ್ತಾಯ ಮಾಡುವಂತಿಲ್ಲ ಎಂಬ ಸರ್ಕಾರದ ನಿಯಮಕ್ಕೆ ಖಾಸಗಿ ಆಸ್ಪತ್ರೆಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬ ಸಾರ್ವಜನಿಕ ಆರೋಪಗಳು ಕೇಳಿಬರುತ್ತಿರುವ ನಡುವೆಯೇ ಇದಕ್ಕೆ ಇಂಬು ಕೊಡುವಂಥ ಘಟನೆ ಕನಕಪುರ ರಸ್ತೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಎರಡು ವಾರದ ಹಿಂದೆ ಕೊರೊನಾ ಸೋಂಕಿತರಾಗಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಶಂಕರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದ ಕೆಂಗೇರಿಯ ನಾಗದೇವನಹಳ್ಳಿ ನಿವಾಸಿ ನಿವೃತ್ತ ಬೆಸ್ಕಾಂ ನೌಕರ ಗಿರಿಯಪ್ಪ (67) ಕಳೆದ ರಾತ್ರಿ ಮೃತಪಟ್ಟಿದ್ದಾರೆ. ಅವರ ಕುಟುಂಬದವರು ಈಗಾಗಲೇ 4.80 ಲಕ್ಷ ಪಾವತಿಸಿದ್ದರು ಇನ್ನೂ 4.72 ಲಕ್ಷ ಪಾವತಿ ಮಾಡಿದರೆ ಮಾತ್ರ ಮೃತದೇಹವನ್ನು ಕೊಡುವುದಾಗಿ ಪಟ್ಟು ಹಿಡಿದಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಕೊರೊನಾ ಸೋಂಕಿತರಾಗಿ ಮೃತಪಟ್ಟವರ ದೇಹವನ್ನು ಕುಟುಂಬದವರಿಗೆ ನೀಡಲು ಆಸ್ಪತ್ರೆಗಳು ಉಳಿದ ಹಣ ಪಾವತಿಸಲು ಒತ್ತಡ ಹಾಕುವಂತಿಲ್ಲ, ಒತ್ತಡ ಹಾಕಿದರೆ ಆಸ್ಪತ್ರೆಯ ಪರವಾನಿಗೆ ರದ್ದು ಮಾಡುವ ಸರ್ಕಾರದ ಎಚ್ಚರಿಕೆಗೆ ಖಾಸಗಿ ಆಸ್ಪತ್ರೆಗಳು ಸೊಪ್ಪು ಹಾಕುತ್ತಿಲ್ಲ ಎಂಬುದಕ್ಕೆ ಇದು ಜೀವಂತ ಉದಾಹರಣೆ ಎಂದು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ..

Spread the love

Related Articles

Leave a Reply

Your email address will not be published. Required fields are marked *

Back to top button