ಕೋವಿಡ್ ಹೊತ್ತಿನಲ್ಲಿ ಅಮಾನವೀಯ ನಡೆ; ಬಾಕಿ ಹಣಕ್ಕಾಗಿ ಮೃತನ ಸಂಬಂಧಿಕರನ್ನು ಕೂಡಿಹಾಕಿದ್ದ ಆಸ್ಪತ್ರೆ

ಬೆಂಗಳೂರು: ಕೋವಿಡ್ ಸಂಕಷ್ಟದಲ್ಲಿ ಜನರು ಬೇಯುತ್ತಿರುವಾಗ ಖಾಸಗಿ ಆಸ್ಪತ್ರೆಗಳು ಎಷ್ಟು ಅಮಾನವೀಯವಾಗಿ ನಡೆದುಕೊಳ್ಳುತ್ತಿವೆ ಎಂಬುದಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಘಟನೆ ಸಾಕ್ಷಿಯಾಗಿದೆ.
ಕೋವಿಡ್ನಿಂದ ವ್ಯಕ್ತಿ ಮೃತಪಟ್ಟರೂ ಶವವನ್ನು ಕೊಡದೇ ಜೊತೆಗಿದ್ದ ಸಂಬಂಧಿಕರನ್ನು ಕೂಡಿಹಾಕಿದ ಘಟನೆ ನಡೆದಿದೆ. 42 ವರ್ಷದ ಲಕ್ಷ್ಮೀನಾರಾಯಣ ಎಂಬವರು ಚನ್ನಸಂದ್ರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಸೋಂಕು ತಗುಲಿದ್ದ ಅವರು ಮೇ 27ರಂದು ಮೃತಪಟ್ಟಿದ್ದರು. ಒಟ್ಟು 8.17 ಲಕ್ಷ ರೂ. ಬಿಲ್ ಆಗಿತ್ತು. ಕುಟುಂಬದವರು 4.5 ಲಕ್ಷ ರೂ. ಪಾವತಿ ಮಾಡಿದ್ದರು.
ಆದರೆ, ಬಾಕಿ ಹಣವನ್ನು ಕೊಡುವ ತನಕ ಶವವನ್ನು ಕೊಡುವುದಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ಪಟ್ಟು ಹಿಡಿದರು. ವ್ಯಕ್ತಿಯನ್ನು ನೋಡಿಕೊಳ್ಳಲು ಆಗಮಿಸಿದ್ದ ಸಂಬಂಧಿಕರನ್ನು ಕೂಡಿ ಹಾಕಿದರು.
ಬೇರೆ ದಾರಿ ಕಾಣದೇ ಉಳಿದ ಹಣವನ್ನು ಹೊಂದಿಸಲು ಕುಟುಂಬ ಸದಸ್ಯರು ತೆರಳಿದರು. ಈ ವಿಚಾರ ಸ್ವಯಂ ಸೇವಕರಿಗೆ ತಿಳಿಯಿತು. ಅವರು ಪೊಲೀಸರಿಗೆ ವಿಚಾರ ಮುಟ್ಟಿಸಿದರು. ಆಸ್ಪತ್ರೆಗೆ ಬಂದ ಪೊಲೀಸರು ಶವವನ್ನು ಕೊಡಿಸಿದರು ಮತ್ತು ಕೂಡಿ ಹಾಕಿದ್ದ ಸಂಬಂಧಿಕರನ್ನು ಬಿಡುಗಡೆ ಮಾಡಿದರು.