Breaking NewsLatestಬೆಳಗಾವಿರಾಜ್ಯಸುದ್ದಿ

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ: ಮಾತುಕತೆಗೆ ಏಕನಾಥ ಶಿಂಧೆ ಇಂಗಿತ

ಬೆಳಗಾವಿ: ‘ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವನ್ನು ಮಾತುಕತೆಯ ಮೂಲಕ ಸರ್ವಸಮ್ಮತದಿಂದ ಬಗೆಹರಿಸಿಕೊಳ್ಳುವುದು ನಮ್ಮ ನಿಲುವು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ.

ಮುಂಬೈನಲ್ಲಿ ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಗಡಿ ಸಮಸ್ಯೆ ಕುರಿತ ನಮ್ಮ ದಾವೆ ಸುಪ್ರೀಂಕೋರ್ಟಿನಲ್ಲಿದೆ.

ಕಾನೂನು ವ್ಯಾಪ್ತಿಯ ಚರ್ಚೆ ಅಲ್ಲಿ ನಡೆಯಲಿ. ಕೇಂದ್ರ ಸರ್ಕಾರ ಹಾಗೂ ಎರಡೂ ರಾಜ್ಯಗಳ ನಡುವೆ ಮಾತುಕತೆ ಮೂಲಕ ಈ ವಿವಾದ ಬಗೆಹರಿಸಿಕೊಳ್ಳುವುದು ಸೂಕ್ತ ಎಂಬುದು ನಮಗೆ ಅನ್ನಿಸುತ್ತಿದೆ’ ಎಂದರು.

‘ಈ ಬಗ್ಗೆ ಮಹಾರಾಷ್ಟ್ರದಲ್ಲಿ ಉನ್ನತಾಧಿಕಾರ ಸಭೆ ನಡೆಸಿದ್ದೇವೆ. ಹಳೆಯ ವಾದ ಏನಿದೆಯೋ ಅದನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಮಂಡಿಸುವ ಕುರಿತು ಚರ್ಚಿಸಿದ್ದೇವೆ’ ಎಂದೂ ಹೇಳಿದ್ದಾರೆ.

‘ಗಡಿ ಜನರ ಜೀವನ ಸುಧಾರಣೆ ಕುರಿತು ಈಚೆಗೆ ನಡೆದ ಎರಡೂ ರಾಜ್ಯಗಳ ರಾಜ್ಯಪಾಲರ ಸಮನ್ವಯ ಸಭೆ ಯಶಸ್ವಿಯಾಗಿದೆ. ಇದೇ ರೀತಿಯ ಸಭೆ ಗಡಿ ವಿಚಾರದಲ್ಲಿಯೂ ನಡೆಯಬೇಕಿದೆ. ಕೇಂದ್ರ ಸರ್ಕಾರ ಕೂಡ ನಮ್ಮ ನಿಲುವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ’ ಎಂದರು.

ಯೋಜನೆಗಳ ತಪ್ಪು ತಿಳವಳಿಕೆ ಬೇಡ:

‘ಮಹಾರಾಷ್ಟ್ರ ಸರ್ಕಾರದಿಂದ ಗಡಿಭಾಗದ ಮರಾಠಿಗರಿಗೆ ಈ ಹಿಂದೆ ನೀಡುತ್ತಿದ್ದ ಯೋಜನೆಗಳ ಲಾಭವನ್ನೇ ನಾವು ಹೆಚ್ಚಿಸಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ₹10 ಸಾವಿರದಿಂದ ₹20 ಸಾವಿರಕ್ಕೆ ಹೆಚ್ಚಿಸಿದ್ದೇವೆ. ‘ಮುಖ್ಯಮಂತ್ರಿ ಧರ್ಮಾದಾಯ ಸಹಾಯ ನಿಧಿ’ ಬಂದ್ ಆಗಿತ್ತು. ಅದನ್ನು ಮತ್ತೆ ಶುರು ಮಾಡಿದ್ದೇವೆ. ಗಡಿಭಾಗದ ಮರಾಠಿಗರಿಗೆ ಆರೋಗ್ಯ ಸೌಲಭ್ಯ ನೀಡಲು ‘ಮಹಾತ್ಮ ಜ್ಯೋತಿಬಾ ಫುಲೆ ಯೋಜನೆ’ ನೀಡಲು ನಿರ್ಣಯ ತೆಗೆದುಕೊಂಡಿದ್ದೇವೆ. ಈ ವಿಷಯವಾಗಿ ಎರಡೂ ರಾಜ್ಯಗಳ ಮಧ್ಯೆ ಗೊಂದಲ ಸೃಷ್ಠಿಯಾಗಬಾರದು. ಕುಳಿತು ಮಾತನಾಡುವುದು ನಮ್ಮ ಇಚ್ಛೆ’ ಎಂದೂ ಹೇಳಿದ್ದಾರೆ.

Spread the love

Related Articles

Leave a Reply

Your email address will not be published.

Back to top button