Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ಮತಾಂತರ ನಿಷೇಧ ಸುಗ್ರಿವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಲಿ: ಸಿದ್ದರಾಮಯ್ಯ

ಬೆಂಗಳೂರು: ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ನಿತ್ಯ ಬೆತ್ತಲೆ ಆಗುತ್ತಿರುವ ರಾಜ್ಯದ ಬಿಜೆಪಿ ಸರ್ಕಾರ ಧಾರ್ಮಿಕ ಭಾವನೆ ಕೆರಳಿಸಿ ಜನರ ಗಮನ ಬೇರೆಡೆ ಸೆಳೆಯುವ ದುರುದ್ದೇಶದಿಂದ ಸುಗ್ರಿವಾಜ್ಞೆ ಮೂಲಕ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆ ಜಾರಿಗೊಳಿಸಲು ಹೊರಟಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಅಲ್ಪಸಂಖ್ಯಾತ ಸಮುದಾಯವನ್ನು ಬೆದರಿಸುವ ಮತ್ತು ಅವರಿಗೆ ಕಿರುಕುಳ ನೀಡುವ ದುರುದ್ದೇಶದಿಂದ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆ ಜಾರಿಗೊಳಿಸಲು ಉದ್ದೇಶಿಸಿರುವ ಸುಗ್ರೀವಾಜ್ಞೆಯನ್ನು ತಿರಸ್ಕರಿಸಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಹೊಸ ಕಾಯ್ದೆ ಬೇಕಿಲ್ಲ

ಆಮಿಷ,ಒತ್ತಡ, ಬೆದರಿಕೆಗಳ ಮೂಲಕ ನಡೆಯುವ ಬಲತ್ಕಾರದ ಮತಾಂತರಗಳನ್ನು ತಡೆಯಲು ನಮ್ಮ ಕಾನೂನು ಸಶಕ್ತವಾಗಿದೆ. ಹೀಗಿದ್ದಾಗ ಹೊಸ ಕಾಯ್ದೆಯ ಅವಶ್ಯಕತೆ ಏನಿದೆ? ಅಲ್ಪಸಂಖ್ಯಾತರನ್ನು ಬೆದರಿಸುವ ಮತ್ತು ಅವರಿಗೆ ಕಿರುಕುಳ ನೀಡುವ ದುರುದ್ದೇಶವಲ್ಲದೆ ಈ ಕಾಯ್ದೆಗೆ ಬೇರೆ ಸದುದ್ದೇಶಗಳೇನಿದೆ?

ಸ್ವಯೀಚ್ಛೆಯಿಂದ ಮತಾಂತರಗೊಳ್ಳುವ ಹಕ್ಕು ಸಂವಿಧಾನವೇ ನೀಡಿದೆ. ಇದರ ಹೊರತಾದ ಮತಾಂತರ ತಡೆಯಲು ಕಾನೂನು ಇದೆ. ಇರುವ ಕಾನೂನನ್ನು ಜಾರಿಗೆ ತರುವ ಪೊಲೀಸ್ ಇಲಾಖೆ ಮತ್ತು ತಪ್ಪು-ಒಪ್ಪುಗಳ ನ್ಯಾಯ ಒದಗಿಸುವ ನ್ಯಾಯಾಂಗದ ಮೇಲೆ ರಾಜ್ಯ ಸರ್ಕಾರಕ್ಕೆ ನಂಬಿಕೆ ಇಲ್ಲವೇ? ಎಂದು ಸರ್ಕಾರವನ್ನು ಅವರು ಪ್ರಶ್ನಿಸಿದ್ದಾರೆ.

ಅಲ್ಪಸಂಖ್ಯಾತರ ಜತೆ ಕಾಂಗ್ರೆಸ್ಸಿದೆ

ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ಕಾಯ್ದೆಯ ದುರುಪಯೋಗವನ್ನು ತಡೆಯಲು ಕಾಂಗ್ರೆಸ್ ಪಕ್ಷ ಖಂಡಿತ ಅವಕಾಶ ನೀಡುವುದಿಲ್ಲ. ಅನ್ಯಾಯ-ದೌರ್ಜನ್ಯಕ್ಕೊಳಗಾಗುವ ಪ್ರತಿಯೊಬ್ಬ ಅಲ್ಪಸಂಖ್ಯಾತ ಬಂಧುವಿನ ಜೊತೆ ನಮ್ಮ ಪಕ್ಷ ನಿಲ್ಲಲಿದ್ದು ಈ ಕಾಯ್ದೆಯ ವಿರುದ್ದ ನಮ್ಮ ಪಕ್ಷ ಜನಾಂದೋಲನ ನಡೆಸಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Spread the love

Related Articles

Leave a Reply

Your email address will not be published.

Back to top button