ಲಾಕ್ ಡೌನ್ ನಲ್ಲಿ ಅಬಕಾರಿ ಇಲಾಖೆಗೆ ಶೇ 10 ಲಾಭ ಹೆಚ್ಚಳ ; ಸಚಿವ ಗೋಪಾಲಯ್ಯ

ಬೆಂಗಳೂರು : ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅಬಕಾರಿ ಇಲಾಖೆ ಸಾಮಾನ್ಯ ದಿನಗಳಿಗಿಂತ ಶೇ 10 ರಷ್ಟು ಲಾಭ ಗಳಿಸಿದೆ ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ತಿಳಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಶಾಸಕರ ಭವನದಲ್ಲಿ ಆಯೋಜನೆಗೊಂಡಿದ್ದ 18 ರಿಂದ 44 ವಯಸ್ಸಿನವರಿಗೆ 3 ದಿನಗಳ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಲಾಕ್ ಡೌನ್ ಆದ ಮೇಲೆ ಏಪ್ರಿಲ್ 1 ರಿಂದ ಜೂನ್ 15 ರವರೆಗೆ ಅಬಕಾರಿ ಇಲಾಖೆಗೆ 4500 ಕೋಟಿ ವರಮಾನ ಬಂದಿದದ್ದು, ಸಾಮಾನ್ಯ ದಿನಗಳಿಗಿಂತ ಶೇ 10 ರಷ್ಟು ಹೆಚ್ಚು ಲಾಭ ಬಂದಂತಾಗಿದೆ ಎಂದು ಮಾಹಿತಿ ನೀಡಿದರು.
ಲಾಕ್ ಡೌನ್ ಸಡಿಲಿಕೆ ಬಗ್ಗೆ ಮುಖ್ಯಮಂತ್ರಿಗಳು ಹೇಳಿರುವಂತೆ ಕಾನೂನು ಇಡೀ ರಾಜ್ಯದಾದ್ಯಂತ ಜಾರಿಯಲ್ಲಿರುತ್ತದೆ ಎಂದು ಹೇಳಿದ ಗೋಪಾಲಯ್ಯ,ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಕೋವಿಡ್ ಲಸಿಕಾ ದಿನದ ಅಂಗವಾಗಿ ಇಂದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ವ್ಯಾಪ್ತಿಯಲ್ಲಿ 3 ಸಾವಿರ ಮಂದಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದರು.
ವಿಶ್ವ ಯೋಗ ದಿನವಾದ ಇಂದು ಪ್ರಧಾನಿ ಮೋದಿ ಪ್ರೇರಣೆ ಮೇರೆಗೆ 175 ಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದ ಸಚಿವರು ಯೋಗ ಮಾಡುವುದರಿಂದ ಕೋವಿಡ್ ನಂತಹ ಮಾರಕ ರೋಗಗಳನ್ನು ಹತ್ತಿಕ್ಕಲಾಗುವುದು ಎಂದು ಅಭಿಪ್ರಾಯಪಟ್ಟರು.
ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆ ಇಂದಿನ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದೆ. ದೊಡ್ಡ ದೊಡ್ಡ ಸಂಸ್ಥೆಗಳು ಸಿಎಸ್ ಆರ್ ಫಂಡ್ ನ ಮೂಲಕ ಜನ ಸೇವೆಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಲಸಿಕೆ ಅಭಿಯಾನದಲ್ಲಿ ಸಾವಿರಾರು ಜನ ಹೆಸರು ನೋಂದಾಯಿಸಿಕೊಂಡು ಕೋವ್ಯಾಕ್ಸಿನ್ ಲಸಿಕೆ ಪಡೆಯುತ್ತಿದ್ದರು.ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ವ್ಯಾಕ್ಸಿನೇಷನ್ ಆದವರಿಗೆ ಕೆಲ ನಿಮಿಷ ವಿಶ್ರಾಂತಿ ಪಡೆಯಲು ಸಹ ಸೌಲಭ್ಯ ಕಲ್ಪಿಸಲಾಗಿತ್ತು.