Breaking NewsLatestಕ್ರೈಂ

ಸರಣಿ ಅಪಘಾತ: ಸ್ನೇಹಿತರಿಬ್ಬರು ಸ್ಥಳದಲ್ಲೇ ಸಾವು

ನೈಸ್‌ ರಸ್ತೆಯಲ್ಲಿ ಗುರುವಾರ ಸಂಜೆ ಸರಣಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಸ್ನೇಹಿತರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಜರಾಜೇಶ್ವರಿನಗರದ ಸುಮುಖ (22) ಹಾಗೂ ಲೀನಾ ನಾಯ್ಡು (19) ಮೃತರು.’ಸುಮುಖ, ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು.

ಲೀನಾ, ಬಿಬಿಎ ಓದುತ್ತಿದ್ದರು. ಅವರಿಬ್ಬರು ಹೊಂಡಾ ಸಿಟಿ ಕಾರಿನಲ್ಲಿ (ಕೆಎ 05 ಎಂಕ್ಯೂ 0855) ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಕೆಂಗೇರಿ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಸುಮುಖ ಕಾರು ಚಲಾಯಿಸುತ್ತಿದ್ದರು. ಪಕ್ಕದ ಸೀಟಿನಲ್ಲಿ ಲೀನಾ ಕುಳಿತಿದ್ದರು. ನೈಸ್ ರಸ್ತೆಯಲ್ಲಿ ಪಿಇಎಸ್ ಕಾಲೇಜು ಕಡೆಯಿಂದ ಸೋಂಪುರ ಕಡೆ ಕಾರು ಹೊರಟಿತ್ತು. ಮಾರ್ಗಮಧ್ಯೆ ಅತೀ ವೇಗದಿಂದ ಕಾರು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿತ್ತು.

‘ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಹಾರಿ ಬಿದ್ದಿದ್ದ ಕಾರು, ಏಕಮುಖ ಸಂಚಾರ ಮಾರ್ಗದ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿತ್ತು. ಎದುರಿಗೆ ಬರುತ್ತಿದ್ದ ಬಸ್‌ ಹಾಗೂ ಫಾರ್ಚ್ಯೂನರ್ ಕಾರಿಗೂ ಡಿಕ್ಕಿ ಹೊಡೆದಿತ್ತು. ಬಸ್ ಹಾಗೂ ಕಾರು ರಸ್ತೆಯಲ್ಲಿ ಉರುಳಿಬಿದ್ದು, ಜಖಂಗೊಂಡವು’ ಎಂದೂ ಪೊಲೀಸರು ತಿಳಿಸಿದರು.

‘ಬಸ್ ಚಾಲಕ ಹಾಗೂ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಳ್ಳುತ್ತಿದ್ದಾರೆ’ ಎಂದೂ ಹೇಳಿದರು.

‘ಸುಮುಖ ಅವರ ಅಜಾಗರೂಕತೆ ಚಾಲನೆ ಹಾಗೂ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಅವರ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿದರು.

ಲಾರಿ ಚಕ್ರ ಹರಿದು ಗಾಯ: ಹಲಸೂರು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ಪವನ್‌ಕುಮಾರ್ (40) ತೀವ್ರವಾಗಿ ಗಾಯಗೊಂಡಿದ್ದಾರೆ.

‘ಉತ್ತರ ಕರ್ನಾಟಕದ ಜಿಲ್ಲೆಯೊಂದರ ಪವನ್‌ಕುಮಾರ್, ಕೆಲಸಕ್ಕಾಗಿ ನಗರಕ್ಕೆ ಬಂದಿದ್ದರು. ಭದ್ರತಾ ಸಿಬ್ಬಂದಿ ಆಗಿ ಕೆಲಸ ಆರಂಭಿಸಿದ್ದರು. ರಾತ್ರಿ ವೇಳೆ, ಆಹಾರ ಪೂರೈಕೆ ಆಯಪ್‌ವೊಂದರ ಡೆಲಿವರಿ ಬಾಯ್ ಆಗಿಯೂ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಪವನ್‌ ಅವರ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿತ್ತು. ವಾಹನದಿಂದ ಬಿದ್ದ ಪವನ್‌ ಅವರ ಕಾಲಿನ ಮೇಲೆಯೇ ಲಾರಿ ಚಕ್ರ ಹರಿದುಹೋಗಿದೆ. ಗಾಯಗೊಂಡಿರುವ ಪವನ್, ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ತಿಳಿಸಿದರು.

Spread the love

Related Articles

Leave a Reply

Your email address will not be published.

Back to top button