ಬಾಗಲಕೋಟೆ-ವಿಜಯಪುರ ಬಿಜೆಪಿ: ಬಿಎಸ್ವೈ ಪರ, ವಿರೋಧಿ ಶಾಸಕರು ಯಾರು ಗೊತ್ತಾ?

ವರದಿ: ರಾಚಪ್ಪ ಬನ್ನಿದಿನ್ನಿ
ಬಾಗಲಕೋಟೆ/ವಿಜಯಪುರ: ರಾಜ್ಯ ರಾಜಕಾರಣದಲ್ಲಿ ಸದ್ಯ ನಾಯಕತ್ವದ ಸದ್ದು ಜೋರಾಗಿ ತಣ್ಣಗಾಗುತ್ತಿದೆ ಎನ್ನಿಸುತ್ತಿದೆ. ಆದರೆ ನಾಯಕತ್ವದ ಅಪಸ್ವರ ಎದಿದ್ದೆ ಉತ್ತರ ಕರ್ನಾಟಕದಿಂದ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಉತ್ತರ ಕರ್ನಾಟಕದ ಪೊಲಿಟಿಕಲ್ ಗೇಮ್ ಪ್ಲಾನ್ ದಿಂದ ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ಅವರ ಕುಟುಂಬದ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಂಬ್ ಸಿಡಿಸುತ್ತಾ, ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬದಲಾವಣೆ ಬಗ್ಗೆ ರಾಜಕೀಯ ಭವಿಷ್ಯ ನುಡಿದಿದ್ದರು.
ಅದು ತೆರೆಮರೆಯಲ್ಲಿ ದೆಹಲಿಯ ಹೈಕಮಾಂಡ್ ಗೂ ತಲುಪಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದು ಸಭೆ ಮೇಲೆ ಸಭೆ ಮಾಡಿದರೂ ನಾಯಕತ್ವ ಬದಲಾವಣೆ ಬದಲಿಗೆ ಬಿ ಎಸ್ ಯಡಿಯೂರಪ್ಪ ಅವರ ಆಡಳಿತಕ್ಕೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಬಿ ಎಸ್ ಯಡಿಯೂರಪ್ಪ ವಿರೋಧಿ ಬಣಕ್ಕಿಂತ ಪರವಿರುವ ಬಣದ ಸಂಖ್ಯಾಬಲವೇ ಹೆಚ್ಚಿದೆ ಹಾಗಾಗಿ ಬಿಎಸ್ವೈ ಕುರ್ಚಿ ಭದ್ರವಾಗಿ ಎಂದರೆ ಎರಡು ಮಾತಿಲ್ಲ.
ಬಿಎಸ್ವೈ ಪರ, ವಿರೋಧಿ ಬಿಜೆಪಿ ಶಾಸಕರು ಯಾರು?
ಬಾಗಲಕೋಟೆ ವಿಜಯಪುರ ಜಿಲ್ಲೆ ಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅವಳಿ ಜಿಲ್ಲೆ.ಆದರೆ ರಾಜಕೀಯ ಮೇಲಾಟದ ಪ್ರಭಾವದಿಂದಾಗಿ ಅವಳಿ ಜಿಲ್ಲೆ ಬಿಜೆಪಿ ಭದ್ರಕೋಟೆಯಾಗಿದೆ. ವಿಜಯಪುರ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಮೂರು ಬಿಜೆಪಿ,ಮೂರು ಕಾಂಗ್ರೆಸ್,ಎರಡು ಜೆಡಿಎಸ್ ಕ್ಷೇತ್ರದ ತೆಕ್ಕಿಗೆ ಹೋಗಿತ್ತು.ಈಚೆಗೆ ಎಂ ಸಿ ಮನಗೂಳಿ ಅಕಾಲಿಕ ಮರಣದಿಂದ ಕ್ಷೇತ್ರ ತೆರವು ವಾಗಿದೆ. ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳ ಪೈಕಿ ಐದು ಬಿಜೆಪಿ,ಎರಡು ಕ್ಷೇತ್ರ ಕಾಂಗ್ರೆಸ್ ಪಾಲಾಗಿವೆ. ಬಿಜೆಪಿ ಪಾಲಿಗೆ ಅವಳಿ ಜಿಲ್ಲೆ ಪವರ್ ಫುಲ್ ಆಗಿದೆ.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೂಗು ಎದ್ದಿದ್ದೇ ವಿಜಯಪುರದಿಂದ. ವಿಜಯಪುರ ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊರತುಪಡಿಸಿದರೆ ಅವಳಿ ಜಿಲ್ಲೆಯಲ್ಲಿ ಬಿಎಸ್ವೈ ಪರವಿರುವ ಶಾಸಕರಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ, ಪುತ್ರ ವಿಜಯೇಂದ್ರ ಅಧಿಕಾರದಲ್ಲಿ ಹಸ್ತಕ್ಷೇಪ, ಭ್ರಷ್ಟಾಚಾರ ವಿರುದ್ಧ ದನಿಯೆತ್ತಿ ನಾಯಕತ್ವ ಬದಲಾವಣೆ ಬಗ್ಗೆ ಬಹಿರಂಗವಾಗಿ ಹೇಳಿಕೆ ಕೊಡುತ್ತಾ ಬಂದಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಹೇಳಿಕೆಗೆ ಹೈಕಮಾಂಡ್ ನೋಟಿಸ್ ಕೂಡಾ ಕೊಟ್ಟಿತ್ತು. ಅದನ್ನು ಲೆಕ್ಕಿಸದೇ ಬಿಎಸ್ವೈ ವಿರುದ್ಧ ಸಮರ ಸಾರಿದ್ದಾರೆ.
ಇನ್ನು ಶಾಸಕ ಸೋಮನಗೌಡ ಪಾಟೀಲ್, ಎ ಎಸ್ ಪಾಟೀಲ್ ನಡಹಳ್ಳಿ ಬಿ ಎಸ್ ಯಡಿಯೂರಪ್ಪ ಬೆಂಬಲಿಗ ಶಾಸಕರು, ಬಿಎಸ್ವೈ ನಾಯಕತ್ವ ಒಪ್ಪಿಕೊಂಡು ಬಿಜೆಪಿಗೆ ಬಂದಿದ್ದು, ಹಾಗಾಗಿ ಬಿಜೆಪಿ ಪರ ಒಲವು ಹೊಂದಿದ ಶಾಸಕರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಐದು ಬಿಜೆಪಿ ಶಾಸಕರಿದ್ದು ಮುಧೋಳ ಶಾಸಕ ಡಿಸಿಎಂ ಗೋವಿಂದ ಕಾರಜೋಳ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಕ್ಕಪಕ್ಕವಿರುವ ಉಪಮುಖ್ಯಮಂತ್ರಿ, ನಾಯಕತ್ವ ಬದಲಾವಣೆ ಪ್ರಶ್ನೆ ಬಂದಾಗ ಡಿಸಿಎಂ ಗೋವಿಂದ ಕಾರಜೋಳ, ಬಿಎಸ್ವೈ
ಪರ ಬ್ಯಾಟಿಂಗ್ ಮಾಡಿದ್ದವರು.
ಇನ್ನು ಬೀಳಗಿ ಶಾಸಕ, ಹಾಗೂ ಗಣಿ ಸಚಿವ ಮುರುಗೇಶ್ ನಿರಾಣಿ ಬಿಎಸ್ವೈ ಆಪ್ತ, ರಾಜಕಾರಣಕ್ಕೆ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಬಂದವರು.ಹಾಗಾಗಿ ಬಿ ಎಸ್ ಯಡಿಯೂರಪ್ಪ ಪರವಾಗಿರುವ ಶಾಸಕರಾಗಿದ್ದಾರೆ. ಇನ್ನು ನಾಯಕತ್ವ ಬದಲಾವಣೆಯಾದರೆ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆ ಬಂದಾಗ ಡಿಸಿಎಂ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ ಹೆಸರು ಮುನ್ನೆಲೆಗೆ ಬಂದಿರುತ್ತೆ.
ಇನ್ನು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ತೇರದಾಳ ಶಾಸಕ ಸಿದ್ದು ಸವದಿ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಇವರು ಬಿಎಸ್ ಯಡಿಯೂರಪ್ಪರ ಕಟ್ಟಾ ಬೆಂಬಲಿಗ ಶಾಸಕರು. ಯಡಿಯೂರಪ್ಪ ನಾಯಕತ್ವ, ಆಡಳಿತದ ಬಗ್ಗೆ ಮೆಚ್ಚುಗೆ ಹೊಂದಿದ ಶಾಸಕರು, ನಾಯಕತ್ವ ಬದಲಾವಣೆ ಪ್ರಶ್ನೆ ಬಂದ ವೇಳೆ ಸಿಎಂ ಬಿಎಸ್ವೈ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಒಟ್ಟಿನಲ್ಲಿ ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಬಿ ಎಸ್ ಯಡಿಯೂರಪ್ಪ ಪರವಾಗಿ ಶಾಸಕರಿದ್ದು, ವಿಪರ್ಯಾಸ ಎಂದರೆ ನಾಯಕತ್ವ ಬದಲಾವಣೆ ಕೂಗು ಉತ್ತರ ಕರ್ನಾಟಕದ ವಿಜಯಪುರದಿಂದ ಎದ್ದಿದೆ.ಇನ್ನು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಪೊಲಿಟಿಕಲ್ ಗೇಮ್ ಪ್ಲಾನ್ ಬಿಜೆಪಿ ಅಧಿಕಾರಕ್ಕೆ ಬರಲು ವರ್ಕೌಟ್ ಆಗಿದೆ. ಏನೇ ಆಗಲಿ ಬಿಜೆಪಿಯೊಳಗಿನ ನಾಯಕತ್ವ ಬದಲಾವಣೆ ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತೇ ಕಾದು ನೋಡಬೇಕಿದೆ.