Breaking Newsರಾಜಕೀಯರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಬಿಜೆಪಿ 100 ಸ್ಥಾನಗಳನ್ನೂ ದಾಟುವುದಿಲ್ಲ; ಪಕ್ಷದ ಆಂತರಿಕ ಸಮೀಕ್ಷೆಯಿಂದಲೇ ಸುಳಿವು

ಎಂ ಹೈದರ್

ಬಿಜೆಪಿಯಲ್ಲಿ ದೆಹಲಿ ಮತ್ತು ಲಕ್ನೋದ ನಡುವೆ ಉನ್ನತ ಮಟ್ಟದಲ್ಲಿ ನಾಯಕರಲ್ಲಿ ಅಸಮಾಧಾನ ದಟ್ಟವಾಗಿರುವ ನಡುವೆಯೇ, ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯು 100 ಸ್ಥಾನಗಳನ್ನು ದಾಟುವುದಿಲ್ಲ ಎಂಬ ಆಘಾತಕಾರಿ ಸುಳಿವು ಪಕ್ಷಕ್ಕೆ ಸಿಕ್ಕಿದೆ ಎನ್ನಲಾಗಿದೆ. ಇದು ಈಗ ಆರ್ ಎಸ್ಎಸ್ ಹಾಗೂ ಬಿಜೆಪಿಯ ಉನ್ನತ ನಾಯಕರನ್ನು ನಿದ್ದೆಗೆಡಿಸಿದೆ.

ಆಂತರಿಕ ಸಮೀಕ್ಷೆಯು ಉತ್ತರ ಪ್ರದೇಶದ ವಿಧಾನಭೆಯ ಚುನಾವಣೆಯ ಬಗ್ಗೆ ರಾಷ್ಟ್ರೀಯ ಮಟ್ಟದ ನಾಯಕರನ್ನು ಚಿಂತೆಗೀಡುಮಾಡಿದೆ. ರಾಷ್ಟ್ರೀಯ ನಾಯಕರು ಬಿರುಸಿನ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದು, ಮೇ 31 ರಿಂದ ಜೂನ್ 2ವರೆಗೂ ಲಕ್ನೋದಲ್ಲಿ ಬೀಡುಬಿಟ್ಟು ಅಲ್ಲಿನ ಚಿತ್ರಣವನ್ನು ಹೈಕಮಾಂಡ್ ಗೆ ಒಪ್ಪಿಸಿದ್ದ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಮತ್ತೆ ಇಂದು ಜೂನ್ 21 ಮತ್ತು 22ಕ್ಕೆ ಲಕ್ನೋದಲ್ಲಿ ಪಕ್ಷದ ನಾಯಕರೊಡನೆ ಮಾತುಕತೆ ನಡೆಸಲಿದ್ದಾರೆ.

ಆಂತರಿಕ ಸಮೀಕ್ಷೆಯ ಪ್ರಕಾರ, ಮುಂದಿನ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಸಹಕಾರವಿಲ್ಲದೆ ಬಿಜೆಪಿಯು ಮತ್ತೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದು ಬಿಜೆಪಿಯ ಉನ್ನತ ನಾಯಕರು ಮನಗಂಡಿದ್ದಾರೆ.

ಪಕ್ಷವು 100 ಸ್ಥಾನಗಳನ್ನು ಸಹ ಪಡೆಯುವುದು ಸಾಧ್ಯವಿಲ್ಲ ಎಂದು ಪಕ್ಷವೇ ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷಗಳ ಸಹಕಾರವಿಲ್ಲದೆ ಪಕ್ಷವು ಉತ್ತರಪ್ರದೇಶದಲ್ಲಿ ತನ್ನ ಮುಂದಿನ ಭವಿಷ್ಯ ರೂಪಿಸಲು ಸಾಧ್ಯವಿಲ್ಲ ಎಂಬ ತನ್ನದೇ ಸಮೀಕ್ಷೆಯ ವರದಿಯನ್ನು ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಅದ್ದರಿಂದ ಮುಂದಿನ ರಾಜಕೀಯ ರಣತಂತ್ರದ ಭಾಗವಾಗಿ ಬಿಜೆಪಿ ಉತ್ತರ ಪ್ರದೇಶದ ಸಣ್ಣ ಸಣ್ಣ ಪಕ್ಷಗಳಿಗೆ ಗಾಳ ಹಾಕಲು ಪ್ರಾರಂಭಿಸಿದೆ.

ಮಾಧ್ಯಮ ವರದಿಯೊಂದರ ಪ್ರಕಾರ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ‘ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷ’ದ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದರು ಆದರೆ ಅವರು ಮಾತನಾಡಲು ನಿರಾಕರಿಸಿದರು. 2017 ರ ವಿಧಾನಸಭಾ ಚುನಾವಣೆಯಲ್ಲಿ ಮಿತ್ರಪಕ್ಷವಾಗಿದ್ದ ಅವರನ್ನು ಮರಳಿ ತರಲು ಬಿಜೆಪಿ ಬಯಸಿದೆ, ಎನ್ನಲಾಗಿದೆ.

ಇದಲ್ಲದೆ, ಬಿಜೆಪಿಯ ಪ್ರಸ್ತುತ ಮಿತ್ರಪಕ್ಷಗಳಾದ ನಿಷಾದ್ ಪಾರ್ಟಿ ಮತ್ತು ಅಪ್ನಾ ದಳ ಕೂಡ ಪರಿಸ್ಥಿತಿಯ ಲಾಭ ಪಡೆಯುವ ಯತ್ನದಲ್ಲಿದ್ದು ಕೇಂದ್ರದಲ್ಲಿ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ. ಮಾಧ್ಯಮ ವರದಿಗಳ ಪ್ರಕಾರ, ಎರಡೂ ಪಕ್ಷಗಳು ಕೇಂದ್ರದಲ್ಲಿ ಸಚಿವ ಸ್ಥಾನಗಳನ್ನು ಬಯಸುತ್ತಿವೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತನ್ನ ಎರಡೂ ಮಿತ್ರಪಕ್ಷಗಳನ್ನು ಕಳೆದುಕೊಳ್ಳಲು ಸಿದ್ದವಿಲ್ಲ.

ಇತ್ತೀಚೆಗೆ ಅಪ್ನಾ ದಳದ ನಾಯಕಿ ಅನುಪ್ರಿಯಾ ಪಟೇಲ್ ಅವರು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದರು. ಅಪ್ನಾ ದಳದ ಅಸಮಾಧಾನವನ್ನು ಕೊನೆಗೊಳಿಸಲು ಅನುಪ್ರಿಯಾ ಪಟೇಲ್ ಅವರನ್ನು ಕೇಂದ್ರದಲ್ಲಿ ಮಂತ್ರಿಯನ್ನಾಗಿ ಮಾಡಬಹುದೆಂಬ ಅಭಿಪ್ರಾಯ ಲಕ್ನೋದ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.

ಈ ನಡುವೆ ರೈತ ನಾಯಕ ರಾಕೇಶ್ ಟಿಕಾಯತ್ ಮತ್ತು ‘ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷ’ದ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಮಣಿಸಲು ಬಿಜೆಪಿ ವಿರೋಧಿ ಮೋರ್ಚಾ ಸ್ಥಾಪಿಸಲು ವೇದಿಕೆ ಸಿದ್ದಪಡಿಸುತ್ರಿದ್ದಾರೆ, ಎನ್ನಲಾಗಿದೆ.

 

Spread the love

Related Articles

Leave a Reply

Your email address will not be published. Required fields are marked *

Back to top button