Breaking Newsಉತ್ತರ ಕನ್ನಡಜಿಲ್ಲಾ ಸುದ್ದಿ
ಸಾವಿನಲ್ಲೂ ಸಾರ್ಥಕತೆ ಮೆರೆದ ಶಿರಸಿಯ ಮಹಿಳೆ

- ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದ ವಿದ್ಯಾನಗರ ನಿವಾಸಿಯಾದ 54 ವರ್ಷದ ಮಹಿಳೆ ಅಕಾಲಿಕ ಮರಣ ಹೊಂದಿದ್ದರು. ಅವರ ಅಂಗಾಂಗ ದಾನ ಮಾಡುವ ಮೂಲಕ ಅವರ ಕುಟುಂಬಸ್ಥರು 8 ಜನರ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಸುನಂದಾ ಸತೀಶ ನಾಯ್ಕ ಎಂಬ ಮಹಿಳೆಗೆ ಚಿಕ್ಕ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ಸುನಂದಾ ಪತಿ ಕೂಡ ಹೃದಯಾಘಾತದಿಂದ ತೀರಿಕೊಂಡಿದ್ದರು. ಇದರಿಂದ ಚೇತರಿಸಿಕೊಳ್ಳಬೇಕು ಎನ್ನುವುದರೊಳಗೆ ತಾಯಿಯೂ ಮರಣ ಹೊಂದಿದ್ದಾರೆ.
ಸುನಂದಾ ಸತೀಶ ನಾಯ್ಕ ಅವರಿಗೆ ಮೆದುಳಿನ ರಕ್ತಸ್ರಾವ ಉಂಟಾದ ಹಿನ್ನೆಲೆಯಲ್ಲಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯ ಐಸಿಯುನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯ ಬ್ರೇನ್ ಡೆಡ್ ಎಂದು ಘೋಷಿಸಲಾಯಿತು.
ಇಂತಹ ದಯನೀಯ ಸ್ಥಿತಿಯಲ್ಲಿಯೂ ಮಕ್ಕಳು ಸಹ, ತಾಯಿಯ ಅಂಗಾಂಗ ದಾನ ಮಾಡುವ ಮೂಲಕ ಅಗತ್ಯವಿದ್ದ 8 ಜನರಿಗೆ ಜೀವನಕ್ಕೆ ಆಸರೆಯಾಗಿದ್ದಾರೆ. ಮಹಿಳೆಯ ಮಕ್ಕಳಾದ ರಕ್ಷಂದಾ ಹಾಗೂ ನಿಶಾಂತ ನಾಯ್ಕ ಈ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇಂತಹ ಧಾರುಣ ಸ್ಥಿತಿಯಲ್ಲಿಯೂ ಸಹ ಮಾನವೀಯತೆ ಮೆರೆದ ಇವರ ಕಾರ್ಯ ಇನ್ನಿತರರಿಗೆ ಮಾದರಿಯಾಗಿದೆ.