ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ: ಬಿ ವೈ ವಿಜಯೇಂದ್ರ

ಮೈಸೂರು : ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ. ಮುಂದಿನ ಎರಡು ವರ್ಷ ಬಿ ಎಸ್ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುಂದಿನ ಎರಡು ವರ್ಷ ಯಡಿಯೂರಪ್ಪ ಅವರೆ ಮುಖ್ಯಮಂತ್ರಿ ಆಗಿರುತ್ತಾರೆ. ಇದನ್ನ ರಾಷ್ಟ್ರೀಯ ನಾಯಕರೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಅನಗತ್ಯ ಎಂದರು.
ಹಲವು ಮುಖಂಡರು ದೆಹಲಿಗೆ ಭೇಟಿ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಯಾರಾದರೂ ದೆಹಲಿಗೆ ಹೋಗಿದ್ದರೆ ಅದು ಅವರ ವೈಯಕ್ತಿಕ ವಿಚಾರ. ದೆಹಲಿ ಭೇಟಿ ಬಗ್ಗೆ ರಾಜಕೀಯ ಬಣ್ಣ ಹಚ್ಚುವುದು ಬೇಡ ಎಂದರು.
ಇನ್ನು ನಾನು ಚುನಾವಣೆಗೆ ನಿಲ್ಲಬೇಕೋ ಬೇಡವೋ.? ನಿಲ್ಲುವುದಾದರೆ ಯಾವ ಕ್ಷೇತ್ರದಿಂದ ನಿಲ್ಲಬೇಕು ಎಂಬುದು ಎರಡು ವರ್ಷದ ನಂತರ ತೀರ್ಮಾನವಾಗುತ್ತೆ. ನಾನು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ನಾನು ಈಗ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಕೆಲಸ ಮಾಡುತ್ತೇನೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.
ಕಾಂಗ್ರೆಸ್ ಗೆ ಬಿಜೆಪಿ ಆಡಳಿತ ಟೀಕಿಸುವ ನೈತಿಕತೆಯೆ ಉಳಿದಿಲ್ಲ. ಕೊರೋನಾ ಸಂಕಷ್ಟ ಕಾಲದಲ್ಲಿ ಜನರ ನೋವಿಗೆ ಸ್ಪಂದಿಸುವುದನ್ನು ಮರೆತು ಹಾದಿ ಬೀದಿಯಲ್ಲಿ ನಿಂತು ಸಿಎಂ ಅಭ್ಯರ್ಥಿ ಬಗ್ಗೆ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ಎಲ್ಲಾ ವಿಚಾರದಲ್ಲೂ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ನವರು ಬಿಜೆಪಿ ಬಗ್ಗೆ ಟೀಕಿಸುವುದು ಹಾಸ್ಯಸ್ಪದ. ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿ ಕುಟುಂಬಗಳಿಗೆ 1 ಲಕ್ಷ ಪರಿಹಾರ ನೀಡಿ ಮಾನವೀಯ ಮೆರೆದಿದ್ದಾರೆ. ಈ ರೀತಿ ಪರಿಹಾರ ನೀಡುತ್ತಿರುವುದು ದೇಶ ದೇಶದಲ್ಲಿ ಮೊದಲು ಎಂದು ಹೇಳಿದರು.