ಕಾಂಗ್ರೆಸ್ ಭಾವಿ ಸಿಎಂ ಫೈಟ್: ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ..?

- ವಿಶೇಷ ವರದಿ: ವೀರೇಶ ಚಿನಗುಡಿ
ಕಲಬುರಗಿ: ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರೆಂದು ಬಿಸಿಬಿಸಿ ಚರ್ಚೆ ನಡಿತಾ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮದ್ಯೆ ಸಿಎಂ ಪಟ್ಟಕ್ಕಾಗಿ ಮುಸುಕಿನ ಗುದ್ದಾಟ ನಡೆಯುತ್ತಿರುವಾಗಲೇ ಮತ್ತೆ ದಲಿತ ಸಿಎಂ ಪ್ರಸ್ತಾಪ ಕೇಳಿಬರುತ್ತಿದೆ.
ವಿಧಾನ ಸಭಾ ಚುನಾವಣೆಗೆ ಎರಡು ವರ್ಷ ಬಾಕಿ ಇರುವಾಗಲೇ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಸಿಎಂ ಪಟ್ಟಕ್ಕಾಗಿ ಗುದ್ದಾಟ ನಡೆದಿದೆ. ಚುನಾವಣೆಯಲ್ಲಿ ಗೆದ್ದಿದ್ದೇವೆ ಅನ್ನೋತರಾ ಕೂಸು ಹುಟ್ಟುವ ಮೊದಲೆ ಕುಲಾಯಿ ಹೊಸಿದರಂತೆ ಹಾಗಾಗಿದೆ ಕಾಂಗ್ರೆಸ್ ಪರಸ್ಥಿತಿ. ಒಂದಡೆ ಸಿದ್ದರಾಮಯ್ಯ ಸಿಎಂ ಆಗಲಿ ಅಂತ ಅವರ ಬೆಂಬಲಿಗರು ಹೇಳ್ತಾ ಇದ್ದರೆ ಒಳಗೊಳಗೆ ಮುನಿಸು ಇಟ್ಟುಕೊಂಡು ಡಿಕೆಶಿ ಮತ್ತು ಬೆಂಬಲಿಗರು ತಿರುಗೇಟು ನೀಡುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಸಿಎಂ ಹುದ್ದೆಯ ಚಂಡು ಹೈಕಮಾಂಡ್ ಮಟ್ಟಕ್ಕೂ ತಲುಪಿದೆ. ಈ ಮದ್ಯೆ ದಲಿತ ಸಿಎಂ ಪದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಎಲ್ಲಾ ಅರ್ಹತೆ ಇದ್ದರೂ ಸಿಎಂ ಸ್ಥಾನದಿಂದ ವಂಚಿತರಾದ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸಿಎಂ ಮಾಡಬೇಕು ಎಂಬ ಪ್ರಸ್ತಾಪ ಕೂಡಾ ಕೇಳಿಬರುತ್ತಿದೆ.
ಐದು ದಶಕಗಳ ರಾಜಕೀಯ ಅನುಭವ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಮತ್ತು ಕೆಂದ್ರದಲ್ಲಿ ಹಲವು ಉನ್ನತ ಸಚಿವ ಸ್ಥಾನಗಳನ್ನು ಸಮರ್ಥರಾಗಿ ನಿಬಾಯಿಸಿದವರಾಗಿದ್ದಾರೆ. ದಲಿತ ಪರವಾಗಿ ಎಂದು ಹೇಳಿ ಆಢಳಿತಕ್ಕೆ ಬರುವ ಕಾಂಗ್ರೆಸ್ ರಾಜ್ಯದಲ್ಲಿ ಒಂದು ಬಾರಿಯೂ ದಲಿತರಿಗೆ ಸಿಎಂ ಪಟ್ಟ ನೀಡಿಲ್ಲ ಹೀಗಾಗಿ ಬರುವ 2023 ರ ಚುನಾವಣೆಯಲ್ಲಿ ದಲಿತ ಸಿಎಂ ಆಗಬೇಕು. ಮಲ್ಲಿಕಾರ್ಜುನ ಖರ್ಗೆ ಅಥವಾ ಜಿ. ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕೆಂದು ಒತ್ತಾಯ ಕೇಳಿ ಬರುತ್ತಿದೆ. ಅದರಲ್ಲೂ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಅವರ ಬೆಂಬಲಿಗರು ಬ್ಯಾಟಿಂಗ್ ಮಾಡಲು ಆರಂಭಿಸಿದ್ದಾರೆ.
ಇದನ್ನೂ ಓದಿ : ತವರಿನತ್ತ ತಿರುಗದ ಮಲ್ಲಿಕಾರ್ಜುನ ಖರ್ಗೆ: ಜಿಲ್ಲೆಯ ಜನರ ಮೇಲೆ ಮುನಿಸಿಕೊಂಡ್ರಾ ಹಿರಿಯ ನಾಯಕ?
ಇನ್ನೊಂದಡೆ ಸಿದ್ದರಾಮಯ್ಯ ಡಿಕೆಸಿ ಇಬ್ಬರ ಗುದ್ದಾಟದ ಜೊತೆಯಲ್ಲೇ ‘ದಲಿತ ಸಿಎಂ’ ಅಭಿಯಾನ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಪ್ಲಸ್ ಪಾಯಿಂಟ್ ಆಗೋದಕ್ಕಿಂತಾ ಹೆಚ್ಚಾಗಿ ಮೈನಸ್ ಪಾಯಿಂಟ್ ಆಗೋ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಯಾಕಂದ್ರೆ ಕುರುಬ ಸಮುದಾಯದ ಸಿದ್ದರಾಮಯ್ಯ ಒಂದಡೆಯಾದರೆ ಕೆಪಿಸಿಸಿ ಅಧ್ಯಕ್ಷ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಮತ್ತೊಂದೆಡೆ ಇದ್ದಾರೆ. ಇವರಿಬ್ಬರನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆ ಕಾಂಗ್ರೆಸ್ ಎದುರಿಸಲಿದೆ. ಈ ನಡುವೆ ದಲಿತರನ್ನೇ ಸಿಎಂ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷ ನಿರ್ಧರಿಸಿದ್ದೇ ಆದರೆ ಯಾವ ದಲಿತ ನಾಯಕನನ್ನು ಆರಿಸಬೇಕು.? ಅನ್ನೋ ಮಹಾನ ಗೊಂದಲ ಕಾಂಗ್ರೆಸ್ ನಲ್ಲಿ ಉದ್ಭವವಾಗಲಿದೆ. ಇದರಿಂದ ಓಟ್ ಬ್ಯಾಂಕ್ ಒಡೆಯುವ ಸಾಧ್ಯತೆಗಳಿವೆ. ಯಾವುದೆ ಏಕ ಮುಖವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಸೋಲಿನ ಕಹಿ ಅನುಭವಿಸಬಹುದು ಅನ್ನೋದು ರಾಜಕೀಯ ವಿಶ್ಲೇಷಕರ ಅನಿಸಿಕೆಯಾಗಿದೆ.
ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸ್ಥಾನಕ್ಕೆ ಲಾಬಿ ನಡೆಸಿದವರಲ್ಲ, ಬದಲಾಗಿ ಪಕ್ಷನಿಷ್ಠೆ ತೋರಿದ ನಾಯಕರಾಗಿದ್ದಾರೆ. ಈ ಹಿಂದೆ ಯಾರೆ ಸಿಎಂ ಆದರೂ ಮಲ್ಲಿಕಾರ್ಜುನ ಖರ್ಗೆ ಅವರದ್ದೆಯಾದ ಸಹಕಾರ ನೀಡುತ್ತಲೆ ಬಂದಿದ್ದಾರೆ. ಈ ಬಾರಿ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿ ಖರ್ಗೆ ಅವರಿಗೆ ಸಿಎಂ ಪಟ್ಟ ಕಟ್ಟಬೇಕು. ಎಲ್ಲರನ್ನು ಒಟ್ಟುಗೂಡಿಸಿಕೊಂಡು ಹೋಗುವ ಸಾಮರ್ಥ್ಯ ಹಾಗೂ ಪ್ರಗತಿಪರ ಚಿಂತಕರಾಗಿರುವ ಖರ್ಗೆ ಅವರನ್ನು ಸಿಎಂ ಮಾಡಿದರೆ ಒಂದಡೆ ಕಾಂಗ್ರೆಸ್ ಪಕ್ಷಕ್ಕೆ ಇನ್ನೊಂದಡೆ ರಾಜ್ಯಕ್ಕೆ ಒಳ್ಳೆ ಸಿಎಂ ಕೊಟ್ಟಿರುವ ಶ್ರೇಯಸ್ಸು ಪಕ್ಷಕ್ಕೆ ಸಿಗಲಿದೆ ಹೀಗಾಗಿ ಹಲವುಬಾರಿ ಸ್ವಲ್ಪದರಲ್ಲಿಯೇ ಸಿಎಂ ಹುದ್ದೆಯಿಂದ ವಂಚಿತರಾದ ಖರ್ಗೆ ಅವರನ್ನು ಸಿಎಂ ಮಾಡಬೇಕು ಅನ್ನೋದು ಅವರ ಬೆಂಬಲಿಗರ ಒತ್ತಾಸೆಯಾಗಿದೆ.
ಒಟ್ಟಿನಲ್ಲಿ ಸಿಎಂ ಪಟ್ಟಕ್ಕಾಗಿ ನಡೆದಿರುವ ಗುದ್ದಾಟದಲ್ಲಿ ಯಾರು ಪಾರಪತ್ಯ ಸಾಧಿಸ್ತಾರೆ.? ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ.? ಹೈಕಮಾಂಡ್ ಗೆ ಹತ್ತಿರವಿರುವ ಖರ್ಗೆ ಅವರನ್ನು ಸಿಎಂ ಮಾಡುವ ಮೂಲಕ ಮತ್ತೆ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಮರಳಿ ಕಳಿಸ್ತಾರಾ? ಎಲ್ಲವನ್ನು ಮುಂದಿನ ಕಾಲಘಟವೇ ಉತ್ತರಿಸಬೇಕು.