Breaking NewsLatestರಾಜಕೀಯರಾಷ್ಟ್ರೀಯ

ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಕೇಸ್: ಎರಡೇ ವರ್ಷಗಳಲ್ಲಿ ಶೇ.17 ಹೆಚ್ಚಳ

ನವದೆಹಲಿ: ಹಾಲಿ ಮತ್ತು ಮಾಜಿ ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳು ಎರಡೇ ವರ್ಷಗಳಲ್ಲಿ ಶೇ. 17ರಷ್ಟು ಹೆಚ್ಚಾಗಿವೆ. ಇದು ಅಪರಾಧ ಮತ್ತು ರಾಜಕೀಯದ ನಡುವಿನ ಸಂಬಂಧವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಕಳೆದ ಐದು ವರ್ಷಗಳಿಂದ ಇದನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್ ಪ್ರಯತ್ನಿಸುತ್ತಿರುವುದರ ನಡುವೆಯೂ, ಜನಪ್ರತಿನಿಧಿಗಳ ಹಣ ಮತ್ತು ತೋಳ್ಬಲದ ಕಾರಣದಿಂದ ವಿಚಾರಣೆಯಲ್ಲಿ ದೀರ್ಘ ವಿಳಂಬವಾಗುತ್ತಿದ್ದು, ಇಂಥ ಪ್ರಕರಣಗಳು ಏರುತ್ತಲೇ ಇವೆ.

ವಿಶೇಷ ಕೋರ್ಟ್ ರಚಿಸುವ ಮೂಲಕ ಸಂಸದರು ಮತ್ತು ಶಾಸಕರ ವಿರುದ್ಧದ ಬಾಕಿಯಿರುವ ಪ್ರಕರಣಗಳ ತ್ವರಿತ ವಿಚಾರಣೆಗೆ ಅನುವು ಮಾಡುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ಒಂಭತ್ತು ತಿಂಗಳ ಬಳಿಕ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಕೈಗೆತ್ತಿಕೊಂಡ ವೇಳೆ, ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯ ಸಲ್ಲಿಸಿದ ವಿಶೇಷ ವರದಿ, ರಾಜಕಾರಣದಲ್ಲಿರುವವರ ವಿರುದ್ಧದ ಕ್ರಿಮಿನಲ್ ಕೇಸ್​ಗಳು ಹೆಚ್ಚಾಗಿರುವುದರ ಮೇಲೆ ಬೆಳಕು ಚೆಲ್ಲಿದೆ.

ಇದನ್ನೂ ಓದಿ: ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಕೇಸ್​: ಹೈಕೋರ್ಟ್ ಅನುಮತಿಯಿಲ್ಲದೆ ಹಿಂತೆಗೆದುಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್

ವಕೀಲೆ ಸ್ನೇಹಾ ಕಲಿಟ ಸಹಯೋಗದೊಂದಿಗೆ ಸಲ್ಲಿಸಿದ್ದ ವರದಿಯಲ್ಲಿ ಹನ್ಸಾರಿಯ ಅವರು ಉಲ್ಲೇಖಿಸಿರುವ ಪ್ರಕಾರ, 2018ರ ಡಿಸೆಂಬರ್‌ನಲ್ಲಿ ಹಾಲಿ ಮತ್ತು ಮಾಜಿ ಸಂಸದರು ಮತ್ತು ಶಾಸಕರ ವಿರುದ್ಧ ಬಾಕಿ ಇದ್ದ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ 4,122. ಅದು 2020ರ ಸೆಪ್ಟೆಂಬರ್​ನಲ್ಲಿ 4859ಕ್ಕೆ ಏರಿದೆ. ಎರಡು ವರ್ಷಗಳಿಗಿಂತ ಕಡಿಮೆ ಸಮಯದಲ್ಲೇ ಶೇ. 17ರಷ್ಟು ಏರಿಕೆಯಾಗಿದೆ.

ಸುಪ್ರೀಂ ಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್ 16, ಅಕ್ಟೋಬರ್ 6 ಮತ್ತು ನವೆಂಬರ್ 4ರ ತನ್ನ ಆದೇಶಗಳಲ್ಲಿ, ಬಾಕಿ ಇರುವ ಪ್ರಕರಣಗಳ ಬಗ್ಗೆ ವರದಿ ಸಲ್ಲಿಸುವಂತೆ ಸಿಬಿಐ ಮತ್ತಿತರ ಕೇಂದ್ರ ಏಜೆನ್ಸಿಗಳಿಗೆ ಸೂಚಿಸಿತ್ತು. ಪುನರಾವರ್ತಿತ ಆದೇಶಗಳಿದ್ದರೂ ಕೇಂದ್ರವು ಅಂಥ ಯಾವುದೇ ವರದಿಯನ್ನು ಸಲ್ಲಿಸಿಲ್ಲ ಎಂದು ಹನ್ಸಾರಿಯ ತಮ್ಮ ವರದಿಯಲ್ಲಿ ಹೇಳಿದ್ದಾರೆ.

ರಾಜ್ಯ ಸರ್ಕಾರಗಳು ತಮ್ಮ ಪಕ್ಷದ ಸಂಸದರು ಮತ್ತು ಶಾಸಕರ ವಿರುದ್ಧದ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿರುವುದರ ಬಗ್ಗೆಯೂ ಹನ್ಸಾರಿಯಾ ತಮ್ಮ ವರದಿಯಲ್ಲಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಅಭ್ಯರ್ಥಿ ಆಯ್ಕೆಯಾದ 48 ಗಂಟೆಗಳೊಳಗೆ ಅಪರಾಧ ದಾಖಲೆ ಬಹಿರಂಗ; ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

Spread the love

Related Articles

Leave a Reply

Your email address will not be published.

Back to top button