‘ಕಾಶ್ಮೀರ್ ಫೈಲ್ಸ್’ ಅಶ್ಲೀಲ, ಪ್ರಚಾರ ಪ್ರಿಯ ಚಿತ್ರ ಎಂದ ಐಎಫ್ಎಫ್ಐ ಜ್ಯೂರಿ ಮುಖ್ಯಸ್ಥನಿಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿರುಗೇಟು

ಮುಂಬೈ: ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ(53rd IFFI) ಸಮಾರೋಪ ಸಮಾರಂಭದಲ್ಲಿ ಜ್ಯೂರಿ ಮುಖ್ಯಸ್ಥ ನಾಡವ್ ಲ್ಯಾಪಿಡ್ ಅವರು ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಅಶ್ಲೀಲ, ಪ್ರಚಾರ ಚಿತ್ರ ಎಂದು ಕರೆದಿರುವುದಕ್ಕೆ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಅವರು, ಶುಭೋದಯ, ಸತ್ಯ ಯಾವಾಗಲೂ ಅಪಾಯವಾಗಿರುತ್ತದೆ, ಇದು ಮನುಷ್ಯರನ್ನು ಸುಳ್ಳು ಹೇಳುವಂತೆ ಮಾಡುತ್ತದೆ ಎಂದು ಬರೆದು ಸೃಜನಾತ್ಮಕ ಜಾಗೃತಿ ಎಂದು ಹ್ಯಾಶ್ ಟಾಗ್ ನೀಡಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರ ಅಶ್ಲೀಲವಾಗಿದ್ದು, ಪ್ರಚಾರಕ್ಕೋಸ್ಕರ ಮಾಡಲಾಗಿದೆ. ಇಂತಹ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಅಂತಹ ಚಿತ್ರವನ್ನು ನೋಡಿ ನನಗೆ ಆಘಾತವಾಗಿದೆ ಎಂದು ಹೇಳಿದ್ದು ಚಿತ್ರೋತ್ಸವದ ವಿಡಿಯೊವೊಂದು ವೈರಲ್ ಆಗಿದ್ದು ಅದರಲ್ಲಿ ಲ್ಯಾಪಿಡ್ ಚಿತ್ರವನ್ನು ಟೀಕಿಸುತ್ತಿದ್ದಾರೆ.
ನಮಗೆಲ್ಲರಿಗೂ 15ನೇ ಚಿತ್ರ ನೋಡಿ ಆಘಾತ ಮತ್ತು ಮನಸ್ಸಿಗೆ ತುಂಬಾ ನೋವಾಗಿದೆ. ಅದು ಕಾಶ್ಮೀರ್ ಫೈಲ್ಸ್ ಚಿತ್ರ. ಇದೊಂದು ಪ್ರಚಾರ ಪ್ರಿಯ, ಅಶ್ಲೀಲ ಚಿತ್ರ, ಇಂತಹ ಪ್ರತಿಷ್ಟಿತ ಚಿತ್ರೋತ್ಸವದಲ್ಲಿ ಇಂತಹ ಕೀಳು ಮಟ್ಟದ ಚಿತ್ರವನ್ನು ಸ್ಪರ್ಧೆಗೆ ತರುವುದು ಸರಿಯಲ್ಲ. ನನ್ನ ಈ ಭಾವನೆಯನ್ನು ಮುಕ್ತವಾಗಿ ಹೇಳಿಕೊಳ್ಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಈ ಚಿತ್ರೋತ್ಸವದ ಸಂದರ್ಭದಲ್ಲಿ ಈ ಬಗ್ಗೆ ವಿಮರ್ಶಾತ್ಮಕ ಚರ್ಚೆಗೆ ಸ್ವಾಗತವಿದೆ, ಕಲಾವಿದರು ಕಲಾ ಬದುಕಿನಲ್ಲಿ ಅದು ಮುಖ್ಯ ಕೂಡ ಎಂದು ನಿನ್ನೆ 53ನೇ ಐಎಫ್ಎಫ್ಐ ಚಿತ್ರೋತ್ಸವದ ಮುಕ್ತಾಯ ಸಮಾರಂಭದಲ್ಲಿ ಹೇಳಿದ್ದರು.