ಪತ್ತೆ ಆಗದ ದಿವ್ಯಾ ಹಾಗರಗಿ: ಪ್ರಭಾವಿ ಸಚಿವರ ಆಶ್ರಯದಲ್ಲಿದ್ದಾರಾ ಲೇಡಿ ಲೀಡರ್?

ಕಲಬುರಗಿ: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಕಲ್ಬುರ್ಗಿ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಒಡತಿ ಇನ್ನೂ ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಳೆದ ಏಳು ದಿನಗಳಿಂದ ಸಿಐಡಿ ಪೊಲೀಸರು ದಿವ್ಯಾ ಹಾಗರಗಿಗಾಗಿ ಹುಡುಕಾಟ ನಡೆಸುತ್ತಿದ್ದರೂ ಸಹ ಈವರೆಗೆ ದಿವ್ಯ ಅವರನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ. ದಿವ್ಯಾ ಪತಿ ರಾಜೇಶ್ ಹಾಗರಗಿಯ ಮಾಹಿತಿ ಮೇರೆಗೆ ವಿಜಯಪುರಕ್ಕೂ ಕೂಡ ಸಿಐಡಿ ತಂಡ ಹೋಗಿ ಬರಿಗೈನಲ್ಲಿ ವಾಪಸ್ಸಾಗಿದ್ದಾರೆ. ಆಗಾದ್ರೆ ಸಿಐಡಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ದಿವ್ಯಾ ಹೋಗಿದ್ದಾದ್ರು ಎಲ್ಲಿಗೆ ಎಂಬ ಪ್ರಶ್ನೆ ಮೂಡಿದೆ. ದಿವ್ಯಾ ಹಾಗರಗಿ ಕರ್ನಾಟಕ ಬಿಟ್ಟು ಬೇರೆಲ್ಲೂ ಹೋಗಿಲ್ಲ ಬೆಂಗಳೂರಿನಲ್ಲೇ ಇದ್ದಾರೆ ಎಂಬ ಶಂಕೆ ಹುಟ್ಟಿಕೊಂಡಿವೆ. ಹೀಗಾಗಿ ಸಿಐಡಿ ಅಧಿಕಾರಿಗಳು ದಿವ್ಯಾ ಹಾಗರಗಿಗಾಗಿ ಬೆಂಗಳೂರಿನಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ ಎನ್ನಲಾಗಿದೆ.
ದಿವ್ಯಾ ಜೊತೆಗೆ ಹಲವರು ನಾಪತ್ತೆ
ಒಂದು ಕಡೆ ಜ್ಞಾನ ಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ ನಾಪತ್ತೆಯಾದರೆ, ಮತ್ತೊಂದೆಡೆ ಜ್ಞಾನ ಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶೀನಾಥ್, ಇಬ್ಬರು ಟೀಚರ್ಸ್ ಹಾಗೂ ಪಿಎಸ್ಐ ಕ್ಯಾಂಡಿಡೇಟ್ ಗಳನ್ನ ಹುಡುಕಿ ಡೀಲ್ ಕುದುರಿಸುತ್ತಿದ್ದ ನೀರಾವರಿ ಇಲಾಖೆಯ ಇಂಜಿನಿಯರ್ ಮಂಜುನಾಥ ಕೂಡ ನಾಪತ್ತೆಯಾಗಿದ್ದಾರೆ. ಇನ್ನು ಸಿಐಡಿ ಅಧಿಕಾರಿಗಳು ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದು, ಇಂದು ಜ್ಞಾನ ಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶೀನಾಥ್ ಮನೆಗೆ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಸಿಐಡಿ ತಂಡ ಭೇಟಿ ನೀಡಲಿದೆ.
ಅಭ್ಯರ್ಥಿಗಳ ವಿಚಾರಣೆ ಇಂದು
545 ಪಿಎಸ್ಐ ಹುದ್ದೆಗಳ ನೇಮಕಾತಿ ಆಕ್ರಮ ಪ್ರಕರಣ ಸಂಭಂದಿಸಿದಂತೆ ಪಿಎಸ್ಐ ಪರೀಕ್ಷೆ ಬರೆದ 50 ಅಭ್ಯರ್ಥಿಗಳ ವಿಚಾರಣೆಗೆ ಸಿಐಡಿ ಮುಂದಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಸಿಐಡಿ ಕಚೇರಿಗೆ ಹಾಜರಾಗುವಂತೆ 50 ಜನ ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕಲಂ 91 ಸಿಆರ್ಪಿಸಿ ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದು. ನೇಮಕಾತಿ ಪರೀಕ್ಷೆ ಹಾಲ್ ಟಿಕೆಟ್, ಓಎಮ್ ಆರ್ ಶಿಟ್, ಕಾರ್ಬನ್ ಪ್ರತಿ ತರುವಂತೆ ಸೂಚಿಸಲಾಗಿತ್ತು. ಅದರಂತೆ ಅಭ್ಯರ್ಥಿಗಳು ಇಂದು ಬೆಂಗಳೂರು ಸಿಐಡಿ ಕಚೇರಿಗೆ ಆಗಮಿಸಿ ವಿಚಾರಣೆಗೆ ಒಳಗಾಗಿದ್ದಾರೆ.
ಸಿಐಡಿ ಕಸ್ಟಡಿ ಇವತ್ತು ಸಂಜೆಗೆ ಅಂತ್ಯ
ಅಕ್ರಮಕ್ಕೆ ಸಂಭಂದಿಸಿದಂತೆ ಬಂಧಿಸಲಾದ ಆರೋಪಿಗಳನ್ನು ಮೂರು ದಿನ ಸಿಐಡಿ ಕಸ್ಟಡಿಗೆ ನೀಡಿದ ಅವಧಿ ಇವತ್ತು ಸಂಜೆಗೆ ಅಂತ್ಯವಾಗಲಿದೆ. ಮೂರು ಜನ ಅಭ್ಯರ್ಥಿಗಳು ಹಾಗೂ ಮೂರು ಜನ ಮೇಲ್ವಿಚಾರಕರ ಸಿಐಡಿ ಕಸ್ಟಡಿ ಇಂದು ಅಂತ್ಯವಾಗಲಿದೆ. ಬಂಧಿತ ಆರೋಪಿಗಳಾದ ಪ್ರವೀಣ್ ಕುಮಾರ್ , ಚೇತನ್ ನಂದಗಾಂವ್, ಅರುಣ್ ಪಾಟೀಲ್ ಮತ್ತು ಮೇಲ್ವಿಚಾರಕರಾದ ಸುಮ , ಸಿದ್ದಮ್ಮ , ಸಾವಿತ್ರಿ ಸಿಐಡಿ ಕಸ್ಟಡಿಯಲ್ಲಿದ್ದರು. ಇನ್ನಷ್ಟು ಹೆಚ್ಚಿನ ತನಿಖೆಗಾಗಿ ಮತ್ತೆ ಕಸ್ಟಡಿಗೆ ನೀಡಲು ಸಿಐಡಿ ನ್ಯಾಯಾಲಯದ ಮೊರೆ ಹೊಗುವ ಸಾಧ್ಯತೆ ಇದೆ.
ದಿವ್ಯಾ ರಕ್ಷಣೆಗೆ ನಿಂತ್ರಾ ಬಿಜೆಪಿಯ ಪ್ರಭಾವಿ ಸಚಿವರುಗಳು..!?
ಸರ್ಕಾರದ ಹಲವು ಸಚಿವರ ಜೊತೆ ಉತ್ತಮ ಒಡನಾಟ ಹೊಂದಿದ್ದ ದಿವ್ಯಾ ಹಾಗರಗಿ ಕಲಬುರಗಿ, ವಿಜಯಪುರ ಬಿಟ್ಟು ಬೆಂಗಳೂರು ಸೇಫ್ ಅಂತಾ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಸಚಿವರ ಆಶ್ರಯದಲ್ಲಿ ಸೇಫ್ ಆಗಿದ್ದಾರೆ ಎಂಬ ಅನುಮಾನಗಳು ದಟ್ಟವಾಗುತ್ತಿವೆ. ದಿವ್ಯಾ ಹಾಗರಗಿ ಹಿಂದೆ ಪ್ರಭಾವಿ ಸಚಿವರ ಕೃಪಾಕಟಾಕ್ಷ ಇರೋದಕ್ಕಾಗಿಯೇ ಸಿಐಡಿ ಅಧಿಕಾರಿಗಳು ದಿವ್ಯಾಳನ್ನ ಟಚ್ ಮಾಡೋಕೆ ಆಗ್ತಿಲ್ವಾ ಎಂಬ ಆರೋಪ ಕಾಂಗ್ರೆಸ್ ನಾಯಕರದ್ದಾಗಿದೆ.