ಕ್ಷಯ ರೋಗ ನಿಯಂತ್ರಣ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

ದೇವನಹಳ್ಳಿ: ಕ್ಷಯರೋಗವನ್ನು ಸಂಪೂರ್ಣವಾಗಿ ತೊಲಗಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರೋಗ ಸಂಬಂಧ ಜಾಗೃತಿ ವಹಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಂತೆ ಹೊಸಕೋಟೆ ತಾಲೂಕಿನಾದ್ಯಂತ ಪ್ರತಿ ಹಳ್ಳಿಗಳಲ್ಲಿ ಎಲ್ ಇ ಡಿ ಪರದೆಯ ಮೇಲೆ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ ನಾಗೇಶ್ ತಿಳಿಸಿದ್ದಾರೆ.
ಹೊಸಕೋಟೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಷಯರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಎಲ್ ಇ ಡಿ ಪರದೆಯ ಮೂಲಕ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಡಾ.ನಾಗೇಶ್, ರಾಷ್ಟ್ರ ಮಟ್ಟದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 2021-22 ನೇ ಸಾಲಿನಲ್ಲಿ ಕ್ಷಯ ರೋಗ ನಿಯಂತ್ರಣದಲ್ಲಿ ಮೂರನೆ ಸ್ಥಾನದಲ್ಲಿದ್ದು, ಕಂಚಿನ ಪದಕ ಪಡೆದಿದೆ ಎಂದಿದ್ದಾರೆ. ಕ್ಷಯ ರೋಗ ನಿಯಂತ್ರಣದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ವೈದ್ಯಕೀಯ ಸಿಬ್ಬಂದಿ ಶ್ರಮದಿಂದ ಈ ಗುರಿ ಸಾದಿಸಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ ವೀಣಾ, ಸರ್ಕಾರಿ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ ಸತೀಶ್, ವೈದ್ಯರಾದ ಡಾ ಫಾರೂಕ್, ಡಾ ರಾಘವೇಂದ್ರ, ಡಾ ಮಂಜುನಾಥ್, ಕ್ಷಯ ರೋಗ ವಿಭಾಗದ ಅಧಿಕಾರಿಗಳಾದ ಸಂದೀಪ್, ಚಂದ್ರಶೇಖರ್, ಮಂಜುನಾಥ್ ಮೊದಲಾದವರು ಹಾಜರಿದ್ದರು.