ಮೇಕೆದಾಟು ಯೋಜನೆ ಶೀಘ್ರ ಜಾರಿ; ಸರ್ಕಾರಕ್ಕೆ ಎಚ್ಡಿಕೆ ಒತ್ತಾಯ

ಕೇಂದ್ರ ಸರ್ಕಾರದ ಅನುಮತಿ ಪಡೆದು ಶೀಘ್ರವೇ ಮೇಕೆದಾಟು ಯೋಜನೆ ಜಾರಿಗೊಳಿಸುವತ್ತ ಗಮನ ಹರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಹೆಚ್ಡಿಕೆ, ಕೇಂದ್ರ ಪರಿಸರ ಸಚಿವಾಲಯವೂ ಶೀಘ್ರ ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕೇಂದ್ರ–ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಸ್ವರ್ಗ ಸೃಷ್ಟಿಯಾಗುವುದಾಗಿ ಬಿಜೆಪಿ ಹೇಳಿತ್ತು. ಸ್ವರ್ಗ ಬೇಡ, ಅನಿಶ್ಚಿತತೆಯಲ್ಲಿ ತೂಗುತ್ತಿರುವ ಮೇಕೆದಾಟು ಯೋಜನೆಗೆ ಪರಿಸರ ಅನುಮತಿಯನ್ನು ಶೀಘ್ರ ಪಡೆದುಕೊಂಡರೆ ಸಾಕು. ನಮ್ಮ ನೆಲ, ಜಲ, ಧನ ಬಳಸಿ ನಮ್ಮವರ ದಾಹ ನೀಗಿಸುವ ಯೋಜನೆ ವಿಚಾರದಲ್ಲಿ ಬಿಜೆಪಿ ಸರ್ಕಾರ ಇನ್ನು ನಿರ್ಲಕ್ಷ್ಯ ತೋರಬಾರದು ಎಂದು ಸಲಹೆ ನೀಡಿದ್ದಾರೆ.
ಮೇಕೆದಾಟು ಯೋಜನೆಯನ್ನು ಯಾವ ಕೋನದಲ್ಲಿ ನೋಡಿದರೂ ಅದು ನ್ಯಾಯವಾಗೇ ಕಾಣುತ್ತದೆ. ಹೀಗಾಗಿ ವಿವಾದ ಅನಗತ್ಯ. ಕಾವೇರಿಗಾಗಿ ಕಲಹ ನಡೆದದ್ದು ಸಾಕು. ಈಗ ನಾವು ಸೋದರತೆ ಮೆರೆಯಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಸೋದರ ಎಂ.ಕೆ.ಸ್ಟಾಲಿನ್ಅವರಿಗೆ ನಾನು ಮತ್ತೊಮ್ಮೆ ಹೇಳಲು ಬಯಸುತ್ತೇನೆ. ಅನಗತ್ಯ ಕಲಹದಲ್ಲಿ, ಅದೂ ಈ ಹೊತ್ತಲ್ಲಿ ನಾವು ಒಡೆದುಹೋಗಬಾರದು ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ.