ಮಹೇಶ್ ಬಾಬು ಮಾತಿಗೆ ಸಾಥ್ ನೀಡಿದ ನಟಿ ಕಂಗನಾ

ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಇತ್ತೀಚಿನ ಹೇಳಿಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಮಹೇಶ್ ಬಾಬು ಮಾತಿಗೆ ಸಾಕಷ್ಟು ಮಂದಿ ತಿರಗೇಟು ನೀಡ್ತಿದ್ರೆ ಮತ್ತೊಂದಷ್ಟು ಮಂದಿ ಸಪೋರ್ಟ್ ಮಾಡ್ತಿದ್ದಾರೆ. ಇದೀಗ ನಟಿ ಕಂಗನಾ ರಣಾವತ್ ಮಹೇಶ್ ಬಾಬುಗೆ ಬೆಂಬಲ ಸೂಚಿಸಿದ್ದಾರೆ.
ಬಾಲಿವುಡ್ ನನ್ನನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ನನಗೆ ಹಿಂದಿಯಲ್ಲಿ ಸಾಕಷ್ಟು ಆಫರ್ಗಳು ಬಂದಿವೆ. ಆದರೆ ಅವರು ನನಗೆ ಸಾಕಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ನನ್ನನ್ನು ಖರೀದಿಸಲು ಸಾಧ್ಯವಾಗದ ಉದ್ಯಮದಲ್ಲಿ ಕೆಲಸ ಮಾಡುತ್ತಾ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ನನಗೆ ಇಲ್ಲಿ ಸಿಗುವ ಸ್ಟಾರ್ಡಮ್ ಮತ್ತು ಗೌರವ ದೊಡ್ಡದಾಗಿದೆ, ಹಾಗಾಗಿ ನನ್ನ ಇಂಡಸ್ಟ್ರಿ ಬಿಟ್ಟು ಬೇರೆ ಇಂಡಸ್ಟ್ರಿಗೆ ಹೋಗುವ ಬಗ್ಗೆ ನಾನು ಯೋಚಿಸಿಲ್ಲ ಎಂಬ ಹೇಳಿಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ.
ಮಹೇಶ್ ಬಾಬು ಮಾತಿಗೆ ಪ್ರತಿಕ್ರಿಯಿಸಿದ ನಟಿ ಕಂಗನಾ, ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಸರಿಯಾಗಿಯೇ ಹೇಳಿದ್ದಾರೆ. ಬಾಲಿವುಡ್ ಅವರನ್ನು ನಿಭಾಯಿಸಲು ಸಾಧ್ಯವಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ. ಮಹೇಶ್ ಬಾಬು ಅವರು ತಮ್ಮ ಕೆಲಸದ ಬಗ್ಗೆ ಗೌರವ ಹೊಂದಿದ್ದಾರೆ. ಬಿಟೌನ್ನ ಅದೆಷ್ಟೋ ನಿರ್ಮಾಪಕರು ಮಹೇಶ್ರನ್ನ ಸಂಪರ್ಕಿಸಿದ್ದಾರೆ. ಆದರೆ ಮಹೇಶ್ ಬಾಬು ಅವರು ತಮ್ಮ ನಿಲುವನ್ನು ಗಟ್ಟಿಗೊಳಿಸಿದ್ದಾರೆ. ಅವರ ಹೇಳಿಕೆ ವಿವಾದ ಮಾಡುವ ಅಗತ್ಯವಿಲ್ಲ, ಅವರಿಗೆ ಚಿತ್ರರಂಗದ ಮೇಲೆ ಗೌರವವಿದೆ ಅಂತಾ ನಟ ಮಹೇಶ್ ಬಾಬು ಪರ ಕಂಗನಾ ಬ್ಯಾಟ್ ಬೀಸಿದ್ದಾರೆ.