ಕೂಡಲಸಂಗಮಕ್ಕೆ ಸಚಿವ ಯೋಗೇಶ್ವರ್ ದಿಢೀರ್ ಭೇಟಿ

ಬಾಗಲಕೋಟೆ: ಬಿಜೆಪಿ ರೆಬೆಲ್ ಸಚಿವ ಸಿ ಪಿ ಯೋಗೇಶ್ವರ್ ಕೂಡಲಸಂಗಮಕ್ಕೆ ಇಂದು ದಿಢೀರ್ ಭೇಟಿ ನೀಡಿ, ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಜೊತೆ 45 ನಿಮಿಷಗಳ ಕಾಲ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಮಾಡಿದ ಸಚಿವ ಸಿ ಪಿ ಯೋಗೇಶ್ವರ್ ಆ ಬೆನ್ನಲ್ಲೇ ಶ್ರೀ ಭೇಟಿ ಮಾಡಿ, ಚರ್ಚೆ ನಡೆಸಿದರು. ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ, ಈಚೆಗೆ ಸಿಎಂ ಬದಲಾವಣೆ ವಿಚಾರವಾಗಿ ರಾಜ್ಯಕ್ಕೆ ಭೇಟಿ ನೀಡಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿ, ಸಿಎಂ ಬದಲಾವಣೆ ಮಾಡುವುದಾದರೆ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದ ಪಂಚಮಸಾಲಿ ಶಾಸಕರಿಗೆ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಇನ್ನು ಸಚಿವ ಸಿಪಿ ಯೋಗೇಶ್ವರ್ ದೆಹಲಿಗೆ ಭೇಟಿ ನೀಡಿ, ಸಿ ಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಈಗ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮಕ್ಕೆ ಪೂರ್ವ ನಿಗದಿ ಪ್ರವಾಸ ಇಲ್ಲದೇ ದಿಢೀರ್ ಭೇಟಿ ನೀಡಿ ತೆರಳಿದ್ದಾರೆ.ಇದೀಗ ಸಚಿವ ಸಿ ಪಿ ಯೋಗೇಶ್ವರ್ ಹಾಗೂ ಪಂಚಮಸಾಲಿ ಪೀಠದ ಶ್ರೀಗಳ ಭೇಟಿ ರಾಜಕೀಯ ವಲಯದಲ್ಲಿ ಹಲವು ಚರ್ಚೆಗೆ ಗ್ರಾಸವಾಗಿದೆ.