ಸೋಮವಾರದಿಂದ ಮೈಸೂರು ಭಾಗಶಃ ಅನ್ಲಾಕ್

ಮೈಸೂರು: ಕೋವಿಡ್ ಲಾಕ್ಡೌನ್ ನಿರ್ಬಂಧದಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಸ್ವಲ್ಪ ರಿಲ್ಯಾಕ್ಸ್ ಸಿಕ್ಕಿದೆ. ಮೈಸೂರು ಜಿಲ್ಲೆಯನ್ನು ಸರ್ಕಾರ ಕೆಟಗಿರಿ 3ರಿಂದ ಮೇಲ್ದರ್ಜೆಗೆ ಸೇರಿಸಿ ಕೆಟಗೆರಿ 2ಕ್ಕೆ ಸೇರ್ಪಡೆ ಮಾಡಿದೆ.
“ರಾಜ್ಯ ಸರ್ಕಾರದ ಆದೇಶದ ಮೇರೆಗೆ ಲಾಕ್ಡೌನ್ನಲ್ಲಿ ಸಡಿಲಿಕೆ ಮಾಡಲಾಗಿದ್ದು, ಅನ್ಲಾಕ್ 1ರಂತೆ ಕೆಟಗಿರಿ 2ಕ್ಕೆ ಅನ್ವಯಿಸಿರುವ ನೀತಿ ನಿಯಮಗಳು ಜಾರಿಯಾಗಲಿವೆ,” ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರಿನಲ್ಲಿ ಶೇ.10ಕ್ಕಿಂತ ಜಾಸ್ತಿ ಇದ್ದ ಪಾಸಿಟಿವಿಟಿ ದರ ಶೇ 5- 10ರೊಳಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಜೂ. 28ರಿಂದ ಕೈಗಾರಿಕೆ, ಉದ್ದಿಮೆಗಳು ಶೇ.50ರಷ್ಟು ಕಾರ್ಮಿಕರು ಕೆಲಸ ಮಾಡುವ ಅವಕಾಶ, ಗಾರ್ಮೆಂಟ್ಸ್ಗಳಿಗೆ ಶೇ.30ರಷ್ಟು ಅವಕಾಶ. ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅವಕಾಶ, ಬೀದಿ ಬದಿ ವ್ಯಾಪಾರಿಗಳು, ಫಾಸ್ಟ್ಫುಡ್ಗೂ ಅವಕಾಶ ಕಲ್ಪಿಸಲಾಗಿದೆ. ಮದ್ಯದಂಗಡಿಗಳು ಸಹ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳಲ್ಲಿ ಕೇವಲ ಮೂವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.