ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಕೇಸ್: ಹೈಕೋರ್ಟ್ ಅನುಮತಿಯಿಲ್ಲದೆ ಹಿಂತೆಗೆದುಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಸಂಬಂಧಿತ ಹೈಕೋರ್ಟ್ನ ಪೂರ್ವಾನುಮತಿಯಿಲ್ಲದೆ ಹಿಂತೆಗೆದುಕೊಳ್ಳುವಂತಿಲ್ಲ ಎಂಬ ಮಹತ್ವದ ಆದೇಶವನ್ನು ಸುಪ್ರಿಂ ಕೋರ್ಟ್ ಹೊರಡಿಸಿದೆ.
ಇಂಥ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಮುಂದಿನ ಆದೇಶದವರೆಗೂ ಸೇವೆಯಲ್ಲಿ ಮುಂದುವರಿಯಬೇಕು ಎಂದೂ ಮಂಗಳವಾರದ ಆದೆಶದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

ಸಿಜೆಐ ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿನೀತ್ ಶರಣ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ವಿಚಾರದಲ್ಲಿ ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯ ಅವರ ಸಲಹೆಯನ್ನು ಅಂಗೀಕರಿಸಿತು.
ಸಂಸದರು ಮತ್ತು ಶಾಸಕರ ವಿರುದ್ಧದ ಬಾಕಿಯಿರುವ ಮತ್ತು ವಿಲೇವಾರಿಯಾಗಿರುವ ಕೇಸ್ಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರ ವಿವರಗಳನ್ನು ಸಲ್ಲಿಸುವಂತೆಯೂ ಎಲ್ಲಾ ಹೈಕೋರ್ಟ್ಗಳ ಪ್ರಧಾನ ರಿಜಿಸ್ಟ್ರಾರ್ಗಳಿಗೆ ಸೂಚಿಸಿತು.
ಸಿಬಿಐ ಮತ್ತು ವಿಶೇಷ ಕೋರ್ಟ್ಗಳಲ್ಲಿ ಅಂಥ ಕೇಸ್ಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಮುಂದಿನ ಆದೇಶದವರೆಗೂ ಸೇವೆಯಲ್ಲಿ ಮುಂದುವರಿಯುವಂತೆ ಪೀಠ ಹೇಳಿತು.
ಸಂಸದರು ಮತ್ತು ಶಾಸಕರ ವಿರುದ್ಧದ ಬಾಕಿಯಿರುವ ಪ್ರಕರಣಗಳನ್ನು ವಿಶೇಷ ಕೋರ್ಟ್ ರಚಿಸುವ ಮೂಲಕ ತ್ವರಿತ ವಿಚಾರಣೆಗೆ ಅನುವು ಮಾಡುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನ್ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರಿಂ ಕೋರ್ಟ್ ಈ ಆದೇಶ ನಿಡಿದೆ.
ಇದನ್ನೂ ಓದಿ: ಸಂಸದರು ಶಾಸಕರ ವಿರುದ್ಧದ ಕ್ರಿಮಿನಲ್ ಕೇಸ್: ಎರಡೇ ವರ್ಷಗಳಲ್ಲಿ ಶೇ.17 ಹೆಚ್ಚಳ
ಸಂಸದರು ಮತ್ತು ಶಾಸಕರ ವಿರುದ್ಧದ ಕೇಸ್ಗಳ ವಿಚಾರಣೆ ಯಾವ ಹಂತದಲ್ಲಿದೆ ಎಂಬುದರ ಕುರಿತು ಅಮಿಕಸ್ ಕ್ಯೂರಿ ವಿಜಯ್ ಹನ್ಸಾರಿಯ ವರದಿಯೊಂದನ್ನು ಸಲ್ಲಿಸಿದ್ದರು. ಪ್ರಕರಣ ಹಿಂತೆಗೆತಕ್ಕೆ ಹೈಕೋರ್ಟ್ ಪೂರ್ವಾನುಮತಿ ಅಗತ್ಯ ಎಂಬುದೂ ಸೇರಿದಂತೆ ಹಲವು ಸಲಹೆಗಳನ್ನು ಅವರು ತಮ್ಮ ವರದಿಯಲ್ಲಿ ನೀಡಿದ್ದರು.
ಇದನ್ನೂ ಓದಿ: ಅಭ್ಯರ್ಥಿ ಆಯ್ಕೆಯಾದ 48 ಗಂಟೆಗಳೊಳಗೆ ಅಪರಾಧ ದಾಖಲೆ ಬಹಿರಂಗ; ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಸೂಚನೆ