‘ಮುಂದಿನ ಮುಖ್ಯಮಂತ್ರಿ’ ಹೇಳಿಕೆ ಕೊಡಬೇಡಿ; ಶಾಸಕರಲ್ಲಿ ಸಿದ್ದರಾಮಯ್ಯ ಮನವಿ

ಬೆಂಗಳೂರು : ಮುಂದಿನ ಮುಖ್ಯಮಂತ್ರಿ ಕುರಿತು ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡಬಾರದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಶಾಸಕರಲ್ಲಿ ಮನವಿ ಮಾಡಿದ್ದಾರೆ.
“ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ” ಎಂದು ಶಾಸಕರು ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಶಾಸಕರಲ್ಲಿ ಈ ಮನವಿ ಮಾಡಿದ್ದಾರೆ.
ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಹೀಗಾಗಿ ಮುಂದಿನ ಮುಖ್ಯಮಂತ್ರಿ ಎಂದು ಈಗಲೇ ಹೇಳಿಕೆ ನೀಡಬಾರದು. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಚುನಾವಣೆ ಬಳಿಕ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಧರಿಸುತ್ತದೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಿನ್ನೆ ಪ್ರತಿಕ್ರಯಿಸಿದ್ದ ಸಿದ್ದರಾಮಯ್ಯ, ಅದು ಶಾಸಕರ ವೈಯಕ್ತಿಕ ಹೇಳಿಕೆ, ನಾನೇನೂ ಮಾಡಲು ಆಗುವುದಿಲ್ಲ ಎಂದಿದ್ದರು. ಅದು ಒಂದು ರೀತಿಯಲ್ಲಿ ಪರೋಕ್ಷ ಸಮರ್ಥನೆಯ ಹಾಗಿತ್ತು. ಆದರೆ ಒಂದೇ ದಿನದಲ್ಲಿ ಸಿದ್ದರಾಮಯ್ಯ ಬಹಿರಂಗ ಹೇಳಿಕೆ ನೀಡದಂತೆ ಶಾಸಕರಲ್ಲಿ ಮನವಿ ಮಾಡಿರುವುದು, ಕಾಂಗ್ರೆಸ್ ಒಳಗಡೆ ಏನೋ ನಡೆಯುತ್ತಿರುವುದರ ಸುಳಿವು ನೀಡುತ್ತಿದೆ.