ಕಲಬುರಗಿ ಜಿಲ್ಲೆಯಲ್ಲಿ ಕೆಲಸವಿಲ್ಲದೆ ಗೂಳೆಗೆ ಮುಂದಾದ ಜನ!

ಕಲಬುರಗಿ: ಇದು ಸಿಮೆಂಟ್ ಕಾರ್ಖಾನೆಯುಳ್ಳ ಜಿಲ್ಲೆ. ಇಲ್ಲಿ ಸಿಮೆಂಟ್ ಕಾರ್ಖಾನೆ ಬಿಟ್ಟರೆ ಬೇರೆಯಾವುದೇ ಕಾರ್ಖಾನೆಗಳಿಲ್ಲ. ಹೀಗಾಗಿ ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಜನ ಗುಳೆ ಹೋರಡೋಕೆ ಶುರು ಮಾಡಿದ್ದಾರೆ.. ಜನರ ಗುಳೆ ತಪ್ಪಿಸಲು ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಬಲಿಷ್ಠಗೊಳಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ..
ಇಡೀ ಏಷ್ಯಾ ಖಂಡದಲ್ಲಿ ಹೆಚ್ಚಾಗಿ ತೊಗರಿ ಬೆಳೆಯುವ ಪ್ರದೇಶವೆಂಬ ಖ್ಯಾತಿ ಪಡೆದ ಕಲಬುರಗಿ ಜಿಲ್ಲೆಯಲ್ಲಿ ಅನೇಕ ಸಿಮೆಂಟ್ ಕಾರ್ಖಾನೆಗಳಿವೆ. ಆದ್ರೆ ದುಡಿಯೋಕೆ ಮಾತ್ರ ಕೈತುಂಬ ಕೆಲಸವಿಲ್ಲ. ಹೀಗಾಗಿ ಹೊಟ್ಟೆಪಾಡಿಗಾಗಿ ಜನ ದೂರದ ಮುಂಬಾಯಿ, ಹೈದ್ರಾಬಾದ್, ಪುಣೆ, ಬೆಂಗಳೂರು ಸೇರಿದಂತೆ ದೇಶದ ವಿವಿಧಡೆ ಗಂಟು ಮೂಟೆ ಕಟ್ಟಿಕೊಂಡು ಸಂಸಾರ ಸಮೇತ ಗುಳೆ ಹೋಗುತ್ತಿದ್ದಾರೆ. ಈಗಾಗಲೇ ಕಾಳಗಿ ತಾಲೂಕಿನ ರಟಕಲ್ ತಾಂಡಾ, ರುಮ್ಮನಗೋಡ ತಾಂಡಾ, ಮಗಿ ತಾಂಡಾ ಸೇರಿದಂತೆ ಇನ್ನಿತರೆಡೆಯಿಂದ ಕೆಲಸ ಅರಸಿ ಜನ ಗುಳೆ ಹೋಗುತ್ತಿದ್ದಾರೆ.
ಹೀಗಾಗಿ ಜನರು ಗುಳೆ ಹೋಗುವುದನ್ನ ತಡೆಗಟ್ಟಲು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡಲು ಜಿಲ್ಲಾಢಳಿತ ಮುಂದಾಗಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಆ್ಯಕ್ಷನ್ ಪ್ಲಾನ್ ಸಿದ್ದ ಮಾಡಿಕೊಂಡು ಏಪ್ರಿಲ್ ಒಂದರಿಂದ ನರೇಗಾ ಯೋಜನೆಯಲ್ಲಿ ಜನರಿಗೆ ಕೆಲಸ ನೀಡಿ ಗುಳೆ ಹೋಗುವುದನ್ನ ತಡೆಗಟ್ಟಬೇಕೆಂದು ರೈತ ಹಾಗೂ ಕಾರ್ಮಿಕ ಮುಖಂಡ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದ್ದಾರೆ.
ಕೈಗಾರಿಕೆಗಳನ್ನ ಸ್ಥಾಪನೆ ಮಾಡಿ ಜನರಿಗೆ ಉದ್ಯೋಗ ಕೊಡ್ತೀವಿ ಅಂತಾ ಪುಕ್ಸಟೆ ಭಾಷಣ ಮಾಡುವ ಸರ್ಕಾರ, ಇದುವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಕೈಗಾರಿಕೆ ಸ್ಥಾಪನೆಗೆ ಮುಂದಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಓ ಡಾ. ದಿಲೇಶ್ ಶಸಿ, ಈಗಾಗಲೇ ಜಿಲ್ಲೆಯಲ್ಲಿ ಹಲವು ಕಾಮಗಾರಿಗಳನ್ನ ಗುರುತಿಸಿದ್ದು, ಅವುಗಳಲ್ಲಿ 120 ಕಲ್ಯಾಣಿಗಳ ಹೂಳೆತ್ತುವುದು ಮತ್ತು ಕೆರೆಗಳನ್ನ ಹೂಳೆತ್ತುವ ಕಾರ್ಯಗಳ ಬಗ್ಗೆ ಆ್ಯಕ್ಷನ್ ಪ್ಲಾನ್ ಸಿದ್ದಪಡಿಸಲಾಗಿದ್ದು, ಆಯಾ ಕಾಮಗಾರಿಗಳ ವ್ಯಾಪ್ತಿಯ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಲು ಅವಕಾಶವಿದೆ. ಅದರಂತೆ ಜನರು ಗುಳೆ ಹೋಗದಂತೆ ತಡೆಗಟ್ಟಲು ಉದ್ಯೋಗ ನೀಡಲಾಗುವುದು ಅಂತಾ ಸಿಇಓ ಹೇಳಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಗುಳೆ ಹೋಗಿದ್ದ ಅನೇಕ ಜನ ವಾಪಾಸ್ ಬಂದಿದ್ದು, ಆ ಸಮಯದಲ್ಲಿ ಸಹ ದಿನಕ್ಕೆ ಮುನ್ನೂರು ರೂಪಾಯಿಯಂತೆ ಉದ್ಯೋಗ ನೀಡಲಾಗಿತ್ತು. ಅದರಂತೆ ಈಗಲೂ ಗುಳೆ ಹೋಗುವ ಜನರಿಗೆ ಮನರೇಗಾ ಅಡಿಯಲ್ಲಿ ಕೆಲಸ ನೀಡುವುದಾಗಿ ಸಿಒಓ ಹೇಳಿದ್ದಾರೆ..
ಒಟ್ನಲ್ಲಿ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನ ಬಲಪಡಿಸಲು ಮತ್ತಷ್ಟು ಕ್ರಮಗಳನ್ನ ಕೈಗೊಳ್ಳುವುದರ ಮೂಲಕ ಜನರು ಗುಳೆ ಹೋಗುವುದನ್ನ ತಪ್ಪಿಸಬೇಕಾಗಿದೆ.