ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲೊಬ್ಬ ಫೋನ್ ಪೇ ವೈದ್ಯ!

ದೇವನಹಳ್ಳಿ: ಶಸ್ತ್ರ ಚಿಕಿತ್ಸೆಗೆ ಬಂದ ವ್ಯಕ್ತಿಯಿಂದ ಲಂಚಕ್ಕೆ ಗುತ್ತಿಗೆ ಆಧಾರಿತ ವೈದ್ಯರೊಬ್ಬರು ಬೇಡಿಕೆ ಇಟ್ಟು ಹಣ ಪಡೆದಿರುವ ಘಟನೆ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ..
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಗ್ರಾಮದ ನಾರಾಯಣಪ್ಪ ಎಂಬುವವರ ಮಗ ಕೂಲಿ ಕೆಲಸ ಮಾಡುತ್ತಿದ್ದಾಗ ಕುಸಿದು ಬಿದ್ದು ಬಲಗಾಲಿನ ತೊಡೆ ಮುರಿದಿದೆ. ಈ ವೇಳೆ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಬಳಿಕ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಪಾರ್ಥಸಾರಥಿ, ನಾರಾಯಣಪ್ಪರಿಂದ 30 ಸಾವಿರ ಹಣವನ್ನು ಕೊಡಬೇಕು ನಂತರ ಚಿಕಿತ್ಸೆ ನೀಡುವುದಾಗಿ ತಿಳಿಸಿ ತಮ್ಮ ಅಕೌಂಟ್ ಗೆ ಆನ್ಲೈನ್ ಮೂಲಕ ಎಂಟು ಸಾವಿರದಂತೆ ಎರಡು ಬಾರಿ ಹಣವನ್ನು ಹಾಕಿಸಿಕೊಂಡು ಮತ್ತೆ ಮತ್ತಷ್ಟು ಹಣ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಈ ವೇಳೆ ನಾರಾಯಣಪ್ಪ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗೆ ದೂರು ನೀಡಿದ್ದು, ಇದರ ಅನ್ವಯ ವೈದ್ಯ ಪಾರ್ಥಸಾರಥಿ ವಿರುದ್ದ ತನಿಖೆಗೆ ಆದೇಶಿದ್ದಾರೆ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ತಿಪ್ಪೇಸ್ವಾಮಿ ನೇತೃತ್ವದಲ್ಲಿ ಇಂದು ಆಸ್ಪತ್ರೆಗೆ ಭೇಟಿ ನೀಡಿದ ತನಿಖಾಧಿಕಾರಿಗಳು ವೈದ್ಯ ಪಾರ್ಥಸಾರಥಿ ಲಂಚ ಕೇಳಿದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ವೈದ್ಯ ಪಾರ್ಥಸಾರಥಿಯನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮತ್ತಷ್ಟು ತನಿಖೆ ನಡೆಯುತ್ತಿದ್ದು ತನಿಖೆ ಬಳಿಕ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ತಿಪ್ಪೇಸ್ವಾಮಿಯವರು ತಿಳಿಸಿದ್ದಾರೆ.