ರಾಜೀನಾಮೆ ವಿಚಾರ ಕೈಬಿಟ್ಟ ರಮೇಶ್ ಜಾರಕಿಹೊಳಿ; ಕಾನೂನು ಹೋರಾಟಕ್ಕೆ ಸಜ್ಜು

ಬೆಳಗಾವಿ: ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿರ್ಧಾರದಿಂದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಿಂದೆ ಸರಿದಿದ್ದಾರೆ. ಸಹೋದರರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ನಂತರ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಸಿಡಿ ಪ್ರಕರಣದಲ್ಲಿ ಸಿಲುಕಿದ ರಮೇಶ್ ಜಾರಕಿಹೊಳಿ ಅವರಿಗೆ ಆರೋಪಮುಕ್ತರಾದ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸಚಿವ ಸಂಪುಟದಲ್ಲಿ ಮತ್ತೆ ಸಚಿವ ಸ್ಥಾನ ಕೊಡಬಹುದು. ಬಿಜೆಪಿ ಹೈಕಮಾಂಡ್ ಸಹ ರಮೇಶ್ ಪರವಾಗಿಯೇ ಇದೆ. ಆದರೆ ಸದ್ಯಕ್ಕೆ ಕಾನೂನು ಸಂಕಷ್ಟದಲ್ಲಿ ಸಿಲುಕಿರುವ ಕಾರಣ ರಮೇಶ್ ಸಚಿವರಾಗಲು ಅಡಚಣೆ ಇದೆ. ಆರೋಪ ಮುಕ್ತರಾಗುವ ಮೊದಲು ಸಚಿವ ಸ್ಥಾನ ಕೊಟ್ಟರೆ ಪಕ್ಷಕ್ಕೆ ಮುಜುಗುರವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೆಲ ತಿಂಗಳುಗಳ ನಂತರ ಆರೋಪ ಮುಕ್ತರಾಗುತ್ತಿದ್ದಂತೆ ಅವರ ಅಚ್ಚುಮೆಚ್ಚಿನ ಜಲಸಂಪನ್ಮೂಲ ಖಾತೆ ಮತ್ತೆ ಸಿಗಬಹುದು.
ಈ ನಿಟ್ಟಿನಲ್ಲಿ ಸಹೋದರರಾದ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಮನವೊಲಿಕೆ ನಂತರ ರಮೇಶ್ ಜಾರಕಿಹೊಳಿ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲು ಅವರನ್ನು ಭೇಟಿಯಾಗಿ ಭವಿಷ್ಯದ ರಾಜಕೀಯ ಬೆಳವಣಿಗೆ ಚರ್ಚೆ ನಡೆಸಲಿದ್ದಾರೆ.
ಜತೆಗೆ ಇಷ್ಟರಲ್ಲೇ ರಮೇಶ್ ಜಾರಕಿಹೊಳಿ ಇದುವರೆಗೆ ನಡೆದ ರಾಜಕೀಯ ಗೊಂದಲ ಹಾಗೂ ಬೆಳವಣಿಗೆಗಳ ಬಗ್ಗೆ ತೆರೆ ಎಳೆಯಲು ನಿರ್ಧರಿಸಿದ್ದು ಮಹತ್ವದ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ವಾರದಿಂದ ಕೇಳಿಬಂದ ಗೊಂದಲಗಳಿಗೆ ರಮೇಶ್ ಜಾರಕಿಹೊಳಿ ತಾರ್ಕಿಕವಾಗಿ ತೆರೆ ಎಳೆಯುವ ಸಾಧ್ಯತೆ ಇದೆ.