ಖ್ಯಾತ ಲೇಖಕ, ಕವಿ ಡಾ. ಸಿದ್ದಲಿಂಗಯ್ಯ ಅವರ ಸ್ಮರಣೆ : ನುಡಿ ನಮನಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ

ಬೆಂಗಳೂರು: ಸಾಮಾಜಿಕ ಸಮಾನತೆಗಾಗಿ ಕಾವ್ಯ, ವಿವಿಧ ಸಾಹಿತ್ಯ ಪ್ರಕಾರಗಳನ್ನು ರಚಿಸಿ ಪ್ರೇರಣೆ ನೀಡಿದ ಖ್ಯಾತ ಲೇಖಕ, ಕವಿ ನಾಡೋಜ ಡಾ. ಸಿದ್ದಲಿಂಗಯ್ಯ ಅವರ ಸ್ಮರಣೆ ಕಾರ್ಯಕ್ರಮವನ್ನು ನಾಡೋಜ ಡಾ. ಸಿದ್ದಲಿಂಗಯ್ಯ ಸ್ಮಾರಕ ಪ್ರತಿಷ್ಠಾನವು ಜೂನ್ 21 ರಂದು ಆಯೋಜಿಸಿದ್ದು, ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಗೌರವ ನುಡಿ ಸಮರ್ಪಿಸಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮಾನಸ ಸಿದ್ದಲಿಂಗಯ್ಯ ಅವರು ತಿಳಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಹಿಂಭಾಗದಲ್ಲಿರುವ ಕಲಾಗ್ರಾಮದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅಂದು ಬೆಳಿಗ್ಗೆ 10 ಗಂಟೆಗೆ ಡಾ. ಸಿದ್ದಲಿಂಗಯ್ಯ ರವರ ಸಮಾಧಿಗೆ ಪುಷ್ಟ ನಮನ, ಬುದ್ದ ವಂದನೆ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ವಿವಿಧ ಗಣ್ಯರು, ಡಾ. ಸಿದ್ದಲಿಂಗಯ್ಯ ಅವರ ಹಿತೈಷಿಗಳು ಹಾಗೂ ಕುಟುಂಬ ವರ್ಗದವರು ನೆರವೇರಿಸಲಿದ್ದಾರೆ.
ಅಂದು ಮಧ್ಯಾಹ್ನ 12.30 ಕ್ಕೆ ನುಡಿ ನಮನ ನಡೆಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನುಡಿ ನಮನಕ್ಕೆ ಚಾಲನೆ ನೀಡಿ, ಡಾ. ಸಿದ್ದಲಿಂಗಯ್ಯ ಅವರ ಸಮಗ್ರ ಕಾವ್ಯ “ಬೋಧಿವೃಕ್ಷದ ಕೆಳೆಗೆ” ಲೋಕಾರ್ಪಣೆ ನೆರವೇರಿಸಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಎಸ್. ಜಾಫೆಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ.
ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ, ಲಕ್ಷ್ಮಣ ಎಸ್ ಸವದಿ, ಡಾ. ಅಶ್ವತ್ಥ ನಾರಾಯಣ ಸಿ.ಎನ್. ಸಚಿವರಾದ ಬಿ.ಶ್ರೀರಾಮುಲು, ಆರ್. ಅಶೋಕ್, ವಿ.ಸೋಮಣ್ಣ, ಅರವಿಂದ ಲಿಂಬಾವಳಿ, ಎಸ್. ಸುರೇಶ್ ಕುಮಾರ್, ಸಂಸದರಾದ ಶ್ರೀ ವಿ.ಶ್ರೀನಿವಾಸ ಪ್ರಸಾದ್, ಶಾಸಕ ಎನ್. ಮುನಿರತ್ನ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಸಚಿವ ಶ್ರೀ ಹೆಚ್. ಎಂ . ರೇವಣ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ.
ಸಂಜೆ 4 ಗಂಟೆಗೆ ಗೀತ ನಮನ ಕಾರ್ಯಕ್ರಮ ನಡೆಲಿದ್ದು, ಡಾ. ಸಿದ್ದಲಿಂಗಯ್ಯನವರು ಬರೆದ ಕವಿತೆಗಳ ಗಾಯನ ವನ್ನು ಆಯೋಜಿಸಲಾಗಿದೆ. ಖ್ಯಾತ ಜಾನಪದ ಗಾಯಕರಾದ ಬಾನಂದೂರು ಕೆಂಪಯ್ಯ ಅವರು ಅಧ್ಯಕ್ಷತೆವಹಿಸಲಿದ್ದಾರೆ. ಲಿಂಕ್ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಿ ಡಾ. ಸಿದ್ದಲಿಂಗಯ್ಯ ಅವರಿಗೆ ಗೌರವಾರ್ಪಣೆ ಸಲ್ಲಿಸಲು ಪ್ರತಿಷ್ಠಾನದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.