ಅಭ್ಯರ್ಥಿ ಆಯ್ಕೆಯಾದ 48 ಗಂಟೆಗಳೊಳಗೆ ಅಪರಾಧ ದಾಖಲೆ ಬಹಿರಂಗ; ರಾಜಕೀಯ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಅಭ್ಯರ್ಥಿಯನ್ನು ಆಯ್ಕೆ ಮಾಡಿದ 48 ಗಂಟೆಗಳೊಳಗೆ ಅಭ್ಯರ್ಥಿಯ ಅಪರಾಧ ದಾಖಲೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಾಜಕೀಯವನ್ನು ಅಪರಾಧ ರಹಿತಗೊಳಿಸುವ ನಿಟ್ಟಿನ ಮಹತ್ವದ ನಡೆಯಾಗಿ ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದಿದೆ.
ಸಂಸದ ಅಥವಾ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರದಲ್ಲಿ ರಾಜ್ಯ ಸರ್ಕಾರಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸುವುದಕ್ಕಾಗಿ ಪ್ರಕರಣಗಳ ಹಿಂತೆಗೆತಕ್ಕೆ ಹೈಕೋರ್ಟ್ ಪೂರ್ವಾನುಮತಿ ಅಗತ್ಯ ಎಂಬ ಆದೇಶ ನೀಡಿದ ಸಂದರ್ಭದಲ್ಲಿಯೇ ಸುಪ್ರೀಂ ಕೋರ್ಟ್ ಈ ಮಹತ್ವದ ಸೂಚನೆ ನೀಡಿದೆ.
ಇದನ್ನೂ ಓದಿ: ಸಂಸದರು ಶಾಸಕರ ವಿರುದ್ಧದ ಕ್ರಿಮಿನಲ್ ಕೇಸ್: ಎರಡೇ ವರ್ಷಗಳಲ್ಲಿ ಶೇ.17 ಹೆಚ್ಚಳ
ಕಳೆದ ನವೆಂಬರ್ನಲ್ಲಿ ಬಿಹಾರ ಚುನಾವಣೆಗೆ ಸಂಬಂಧಿಸಿದ ಆದೇಶವೊಂದರಲ್ಲಿ, ಚುನಾವಣಾ ಅಭ್ಯರ್ಥಿ ತಾನು ಆಯ್ಕೆಯಾದ 48 ಗಂಟೆಗಳೊಳಗೆ ಅಥವಾ ನಾಮಪತ್ರ ಸಲ್ಲಿಸುವುದಕ್ಕಿಂತ ಕಡೇಪಕ್ಷ ಎರಡು ವಾರಗಳಿಗೆ ಮೊದಲು ತನ್ನ ಅಪರಾಧ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಹೇಳಿತ್ತು. ಈಗ ಅದನ್ನು 48 ಗಂಟೆಗಳಿಗೆ ಮಿತಿಗೊಳಿಸಿ ಆದೇಶಿಸಿದೆ.
ಇದನ್ನೂ ಓದಿ: ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಕೇಸ್: ಹೈಕೋರ್ಟ್ ಅನುಮತಿಯಿಲ್ಲದೆ ಹಿಂತೆಗೆದುಕೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್