ಇಂದು 42ನೇ ಬಿಜೆಪಿ ಸಂಸ್ಥಾಪನಾ ದಿನ; ಸ್ಕಂದ ಮಾತೆಯನ್ನ ನೆನೆದರು ಮೋದಿ

ನವದೆಹಲಿ: ಇಂದು ಬಿಜೆಪಿಯ 42ನೇ ಸಂಸ್ಥಾಪನಾ ದಿನವನ್ನು ಬಿಜೆಪಿ ನಾಯಕರು ಆಚರಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಇಂದು ನವರಾತ್ರಿಯ ಐದನೇ ದಿನ. ಈ ಹಿನ್ನೆಲೆಯಲ್ಲಿ ನಾವು ಸ್ಕಂದ ಮಾತೆಯನ್ನು ಪೂಜಿಸುತ್ತೇವೆ. ಸ್ಕಂದ ಮಾತೆ ಕಮಲದ ಸಿಂಹಾಸನದ ಮೇಲೆ ಕುಳಿತು, ಕಮಲದ ಹೂವನ್ನು ಹಿಡಿದು ಕುಳಿತಿರುವ ದೇವತೆ. ಬಿಜೆಪಿಯ ಪ್ರತಿಯೊಬ್ಬ ಸದಸ್ಯ, ಕಾರ್ಯಕರ್ತನಿಗೂ ಆಶೀರ್ವದಿಸಿ, ಒಳ್ಳೆಯದನ್ನು ಮಾಡು ಎಂದು ನಾನು ಮಾತೆಯಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.
ಬಿಜೆಪಿ ಪಾಲಿಗೆ ಈ ಬಾರಿಯ ಸಂಸ್ಥಾಪನಾ ದಿನ ತುಂಬ ಮಹತ್ವ ಎನ್ನಿಸಿದೆ. ಅದಕ್ಕೆ ಮೂರು ಕಾರಣಗಳಿವೆ. ಅದರಲ್ಲಿ ಮೊದಲನೇಯದು, ನಾವು ಈ ಬಾರಿ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದೇವೆ. ಇದು ಸ್ಫೂರ್ತಿದಾಯಕ ಸಂದರ್ಭ. ಎರಡನೇದಾಗಿ, ಭಾರತ ಜಾಗತಿಕ ಮಟ್ಟದಲ್ಲಿ ಕ್ಷಿಪ್ರವಾಗಿ ಅಭಿವೃದ್ಧಿಯಾಗುತ್ತಿದೆ. ಹೊಸಹೊಸ ಅವಕಾಶಗಳು ಭಾರತಕ್ಕೆ ನಿರಂತರವಾಗಿ ಲಭ್ಯವಾಗುತ್ತಿವೆ. ಹಾಗೇ, ಮೂರನೇ ಕಾರಣ, ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಏರುವ ಮೂಲಕ, ಡಬಲ್ ಎಂಜಿನ್ ಸರ್ಕಾರ ಮತ್ತೆ ಆಡಳಿತಕ್ಕೆ ಬಂದಿದೆ. ಅಷ್ಟೇ ಅಲ್ಲ, ಬರೋಬ್ಬರಿ ಮೂರು ದಶಕಗಳ ನಂತರ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 100 ಎಂದರು.