ಕಣ್ಮರೆಯಾಗಿದ್ದ ವಿಜಯನಗರ ಕಾಲದ ಶಿಲಾಶಾಸನ ಪತ್ತೆ! ಶಾಸನದಲ್ಲಿ ಏನು ಬರೆದಿದೆ?

ದೇವನಹಳ್ಳಿ: ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿ ತಿಂಡ್ಲು ಗ್ರಾಮದ ಟಿ. ಎಸ್. ಉದಯ್ ಕುಮಾರ್ ಎಂಬುವವರ ಹೊಲದಲ್ಲಿ ಸುಮಾರು 120 ವರ್ಷಗಳ ಹಿಂದಿನ ಕಾಲದ ಶಿಲಾಶಾಸನ ಪತ್ತೆಯಾಗಿದೆ.
ಶಾಸನ ಪಿತಾಮಹ ಎಂದೇ ಇತಿಹಾಸ ಗುರುತಿಸಿದ ಬಿ.ಎಲ್.ರೈಸ್ರವರ ಕಾಲದಲ್ಲಿ ಶೋಧಿಸಿ ಹನುಮಂತನ ಹೊಲದಲ್ಲಿ ಎಂದು ದಾಖಲಿಸಿದ ದೇವನಹಳ್ಳಿ ತಾಲ್ಲೂಕಿನ 2ನೇ ಕ್ರಮ ಸಂಖ್ಯೆ ಶಾಸನವು ನಿಧಿಗಳ್ಳರ ಹಾವಳಿಯಿಂದಾಗಿ ಮಣ್ಣಲ್ಲಿ ಹೂತು ಕಣ್ಮರೆಯಾಗಿದ್ದನ್ನು ಇತಿಹಾಸ ಸಂಶೋಧಕ ಬಿಟ್ಟಸಂದ್ರ ಗುರುಸಿದ್ದಯ್ಯ ಅವರು ಟಿ.ಎಸ್. ಉದಯ್ ಕುಮಾರ್ ರವರ ಸಹಕಾರದೊಂದಿಗೆ ಹಲವು ದಿನಗಳ ಪರಿಶ್ರಮದಿಂದ ಪತ್ತೆ ಹಚ್ಚಿ ಗ್ರಾಮಸ್ಥರ ಸಮ್ಮುಖದಲ್ಲಿ ತಿಂಡ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಸನವನ್ನು ಸ್ಥಾಪಿಸುವ ಮೂಲಕ ಸಂರಕ್ಷಣೆ ಮಾಡಿದ್ದಾರೆ.
ತಿಂಡ್ಲು ಗ್ರಾಮದಲ್ಲಿ ಸಿಕ್ಕಿರುವ ಈ ಶಿಲಾಶಾಸನವು ವಿಜಯನಗರ ಸಾಮ್ರಾಜ್ಯದ ಅರಸ ದೇವರಾಯನ ಆಳ್ವಿಕೆಯ ಕಾಲದ ಶಾಸನವಾಗಿದ್ದು, ಪೆನವಲೆ ನಾಯಕನ ಮಗ ಕಾಡಂಣ ನಾಯಕನು ತಿಂಣಲ ಗ್ರಾಮದ ತಿರುಮಲ ಗೌಡರ ಮಕ್ಕಳು ಬಚ್ಚಯ್ಯಗೌಡರಿಗೆ 1 ಖಂಡುಗ ಗದ್ದೆಯನ್ನು ದಾನಕೊಟ್ಟಿದ್ದನ್ನು ಶಾಸನ ತಿಳಿಸುತ್ತದೆ. ತಿಂಡ್ಲು ಗ್ರಾಮಕ್ಕೆ ತಿಂಡಲು ಎನ್ನುವ ಹೆಸರಿದ್ದ ಸಂಗತಿಯನ್ನು ಸಹ ಈ ಶಾಸನ ತಿಳಿಸುತ್ತದೆ. ಈ ಶಾಸನದ ಲಿಪಿಯು ಕ್ರಿ.ಶ 15 ನೇ ಶತಮಾನಕ್ಕೆ ಸೇರಿದ್ದಾಗಿದೆ. ಶಾಸನದ ಮಹತ್ವದ ಬಗ್ಗೆ ಶಾಲಾ ಮಕ್ಕಳಿಗೆ ತಿಳಿಸಿ ಆ ಮೂಲಕ ಅದನ್ನು ಜತನವಾಗಿ ಸಂರಕ್ಷಿಸಬೇಕು ಎಂದು ಇತಿಹಾಸ ಸಂಶೋಧಕ ಬಿಟ್ಟಸಂದ್ರ ಗುರುಸಿದ್ದಯ್ಯನವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಿಂಡ್ಲು ಸರ್ಕಾರಿ ಶಾಲಾ ಮುಖ್ಯಶಿಕ್ಷಕ ನಾಗೇಶ್, ಶ್ರೀ ಕೃಷ್ಣರಾಜ ವಿಶಾಲಾಕ್ಷಿ ಪ್ರೌಡ ಶಾಲಾ ಮುಖ್ಯ ಶಿಕ್ಷಕ ಮುನೇಗೌಡ, ಗ್ರಾಮದ ಮುಖಂಡರಾದ ಟಿ.ಎಂ. ಸೌಮ್ಯಬಾಬು, ವಿನೋದ್, ಮುನೇಗೌಡ, ಲಕ್ಷ್ಮಣ , ದೇವನಹಳ್ಳಿಯ ನಿವೃತ ಶಿಕ್ಷಕ ಎಸ್.ಜಿ.ಪುಟ್ಟರಾಜಣ್ಣ, ಶಾಲಾ ಸಿಬ್ಬಂದಿ ವರ್ಗ ಹಾಗೂ ಶಾಲಾ ಮಕ್ಕಳು ಇದ್ದರು.