ಮಂದ ಬೆಳಕಿನಲ್ಲಿ ಅಂದಗೆಟ್ಟ ಆಟ

ಸೌಥ್ ಹ್ಯಾಂಪ್ಟನ್ : ಹತ್ತು ರನ್ ಗಳಿಸುವುದು ಪೆವಿಲಿಯನ್ ಸೇರುವುದು, ಟೀ ಕುಡಿದು ಮತ್ತೆ ಬರುವುದು. ಇಪ್ಪತ್ತು ರನ್ ಗಳಿಸುವುದು ಮತ್ತೆ ಪೆವಿಲಿಯನ್ ಸೇರುವುದು, ಈ ರೀತಿಯಲ್ಲಿ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದ್ದರೆ ನೋಡುಗರಿರಲಿ, ಆಡುವವರಿಗೂ ಬೇಸರ ಎನಿಸದಿರದು. ಸೌಥ್ ಹ್ಯಾಂಪ್ಟನ್ ನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ನ ಫೈನಲ್ ಪಂದ್ಯದ ಎರಡನೇ ದಿನದಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪ್ರತಿಕೂಲ ವಾತಾವರಣ ಪಂದ್ಯಕ್ಕೆ ಅಡ್ಡಿಯಾದ ಸಂದರ್ಭ ಭಾರತ 64.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತ್ತು. ಇನ್ನೂ 33.2 ಓವರ್ ಗಳ ದಿನದಾಟ ಬಾಕಿ ಇರುತ್ತದೆ. ಭೊಜನ ವಿರಾಮದ ನಂತರ 8 ರನ್ ಗಳಿಸಿ ಆಡುತ್ತಿದ್ದ ಚೇತೇಶ್ವರ ಪೂಜಾರ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಅಜಿಂಕ್ಯಾ ರಹಾನೆ (29*) ಮತ್ತು ವಿರಾಟ್ ಕೊಹ್ಲಿ (44*) 58 ರನ್ ಜತೆಯಾಟವಾಡಿದರು.
ಇದಕ್ಕೂ ಮುನ್ನ ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತ್ತು. ರೋಹಿತ್ ಶರ್ಮಾ (34) ಮತ್ತು ಶುಬ್ಮನ್ ಗಿಲ್ (28) ಉತ್ತಮ ಆರಂಭ ಕಂಡು 62 ರನ್ ಜತೆಯಾಟವಾಡಿದರೂ ತಪ್ಪಿನ ಹೊಡೆತಗಳಿಗೆ ಮನ ಮಾಡಿ ವಿಕೆಟ್ ಒಪ್ಪಿಸಿದರು. ಮಳೆಯಿಂದ ಒದ್ದೆಯಾದ ಪಿಚ್ ನಲ್ಲಿ ಬ್ಯಾಟಿಂಗ್ ಮಾಡುವುದು ಅಷ್ಟು ಸುಲಭವಲ್ಲ. ರೋಹಿತ್ ಶರ್ಮಾ ಹಾಗೂ ಗಿಲ್ ಕಿವೀಸ್ ವೇಗದ ದಾಳಿಯನ್ನು ಸಮರ್ಥವಾಗಿಯೇ ಎದುರಿಸಿದ್ದರು.
68 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 6 ಬೌಂಡರಿ ನೆರವಿನಿಂದ 34 ರನ್ ಗಳಿಸಿ ಆತ್ಮವಿಶ್ವಾಸದ ಹೆಜ್ಜೆ ಇಟ್ಟಿದ್ದರು. ಆದರೆ ಕೆಯ್ಲ್ ಜೆಮಿಸನ್ ಬೌಲಿಂಗ್ ನಲ್ಲಿ ಹೊರ ಹೋಗುತ್ತಿದ್ದ ಚೆಂಡಿಗೆ ಹೊಡೆಯಲೆತ್ನಿಸಿದ ರೋಹಿತ್ ಮೂರನೇ ಸ್ಲಿಪ್ ನಲ್ಲಿದ್ದ ಟಿಮ್ ಸೌಥಿ ಅವರಿಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಅವರ ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ಬೌಲರ್ ಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು.
25ನೇ ಓವರ್ ನಲ್ಲಿ ಭಾರತಕ್ಕೆ ಮತ್ತೊಂದು ಆಘಾತ. 28 ರನ್ ಗಳಿಸಿ ಆತ್ಮವಿಶ್ವಾಸದಲ್ಲಿ ಆಡುತ್ತಿದ್ದ ಗಿಲ್, ನೈಲ್ ವ್ಯಾಗನರ್ ಬೌಲಿಂಗ್ ನಲ್ಲಿ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟಿಗೆ ಮುತ್ತಿಟ್ಟು ವಾಲ್ಟಿಂಗ್ ಅವರ ಕೈ ಸೇರಿತು.
ಸಂಕ್ಷಿಪ್ತ ಸ್ಕೋರ್ :
ಭಾರತ 3 ವಿಕೆಟ್ ನಷ್ಟಕ್ಕೆ 146 ರನ್ ( ವಿರಾಟ್ ಕೊಹ್ಲಿ 44*, ಅಜಿಂಕ್ಯಾ ರಹಾನೆ 29*, ರೋಹಿತ್ 34, ಶಬ್ಮನ್ ಗಿಲ್ 28)
ಜೆಮಿಸನ್ (14ಕ್ಕೆ 1), ವ್ಯಾಗನ್ (28ಕ್ಕೆ1) ಟ್ರೆಂಟ್ ಬೌಲ್ಟ್ (32 ಕ್ಕೆ1)