ಜೂನ್ 23 ವಿಶ್ವ ಟೈಪರೈಟರ್ ದಿನ. ಇವತ್ತು ಟೈಪರೈಟರ್ ಒಂದು ನೆನಪು ಎನ್ನುವಷ್ಟು ದೂರ. ಆದರೆ ಆ ನೆನಪು ಆಧುನಿಕತೆಯ ನಡುವೆಯೂ ಕೇಳಿಸುವ ಒಂದು ಮಧುರ ಸದ್ದಿನಂತೆ. ಟೈಪರೈಟರ್ ನೆಪದಲ್ಲಿ ಬದುಕಿನ ಒಳದನಿಯನ್ನು ಆಲಿಸುವ ಒಂದು ಯತ್ನ ಇಲ್ಲಿ.
- ತೇಜಸ್ವಿ
ಬೆರಳಚ್ಚು ಯಂತ್ರ ಎಂದರೆ ಕೀಲಿಮಣೆಯಲ್ಲಿ ಅಳವಡಿಸಿರುವ ಅಕ್ಷರ ಕೀಲಿಗಳನ್ನು ಬೆರಳುಗಳಿಂದ ಒತ್ತಿದಾಗ ಅನುರೂಪ ಉಕ್ಕಿನ ಮೊಳೆಗಳು ತಮ್ಮ ನೆಲೆಗಳಿಂದ ಸನ್ನೆ ತತ್ವಾನುಸಾರ ಎದ್ದು ಶಾಯಿ ಪಟ್ಟಿಯ ಮೇಲೆ ಬಡಿದು ಅದರ ಅಡಿಯಲ್ಲಿರುವ ಕಾಗದ ಸುರಳಿಯ ಮೇಲೆ ಮುದ್ರಣಾಕ್ಷರಗಳನ್ನು ಪಡಿ ಮೂಡಿಸುವ ಸಲಕರಣೆ ಅಥವಾ ಯಂತ್ರ.
ಮನುಷ್ಯರಿಗೆ ಭಾಷೆ ಒಂದು ವರ. ಇದರ ಸಹಾಯದಿಂದಲೇ ವರ್ತಮಾನ ಕಾಲದ ಮಾನವನಿಗೆ ಭೂತಕಾಲದ ಸಮಸ್ತ ಜ್ಞಾನ ಸಂಪತ್ತು ಮುಂತಾದವು ಲಭಿಸುವುದಾಗಿದೆ. ಮೊದಲು ಆಡು ಭಾಷೆ ರೂಪುಗೊಂಡು ಕ್ರಮೇಣ ಘನೀಭವಿಸಿ ಲಿಖಿತರೂಪ ಪಡೆದು ಮುಂದೆ ಮುದ್ರಣ ಕಲೆಗೆ ಕಾರಣವಾಯಿತು.
ಬೆರಳಚ್ಚು ಯಂತ್ರದ ನಿರ್ಮಾಣದಲ್ಲಿ ಮೊದಲಿಗೆ ಉದ್ಯುಕ್ತನಾದವ ಹೆನ್ರಿಮಿಲ್ ೧೭೧೪ ರ ಮುಂದೆ ೧೮೨೯ರಲ್ಲಿ ಡೆಟ್ರಾಯಿಟ್‌ನ ವಿಲಿಯಮ್ ಬಟ್ ಎಂಬಾತ ಟೈಪೋಗ್ರಾಫರ್ ಯಂತ್ರ ತಯಾರಿಸಿದ. ಇದಕ್ಕೆ ಇನ್ನೊಂದು ಹೆಸರು ಮೊಳೆ ಬರಹಗಾರ ಯಂತ್ರ ಎಂದರ್ಥ.
ಭಾರತದಲ್ಲಿ ನೂರಾರು ವರ್ಷಗಳ ಕಾಲ ಇಂಗ್ಲೀಷರು ರಾಜ್ಯವಾಳುತ್ತಿದ್ದುದರಿಂದ ಇಂಗ್ಲಿಷ್ ವಿದ್ಯಾಭ್ಯಾಸವೇ ಎಲ್ಲ ರಾಜ್ಯಗಳಲ್ಲಿ ಪ್ರಮುಖವಾಗಿತ್ತು. ಸರ್ಕಾರಿ ಕಛೇರಿಗಳಲ್ಲಿ ವ್ಯವಹಾರಗಳು ಇಂಗ್ಲೀಷಿನಲ್ಲೇ ನಡೆಯುತ್ತಿದ್ದವು. ಆಗ ಇಂಗ್ಲೀಷ್ ಶೀಘ್ರಲಿಪಿಯೂ, ಇಂಗ್ಲೀಷ್ ಬೆರಳಚ್ಚು ಯಂತ್ರಗಳೂ ಪ್ರಚಾರಕ್ಕೆ ಬಂದವು. ಈ ಮಾಧ್ಯಮಗಳ ನಿರ್ವಹಣೆಯಲ್ಲಿ ಕಲಿಸಲು ಇಡೀ ರಾಷ್ಟದಲ್ಲಿ ವಾಣಿಜ್ಯ ಶಾಲೆಗಳು ಬಹುಸಂಖ್ಯೆಯಲ್ಲಿ ತಲೆ ಎತ್ತಿದವು. ಭಾರತ ದೇಶದಲ್ಲಿ ಕೋಟ್ಯಾಂತರ ಜನರು ಬೆರಳಚ್ಚು ಯಂತ್ರದ ಮೂಲಕ ಸರ್ಕಾರದಲ್ಲಿ ಉದ್ಯೋಗವನ್ನು ಪಡೆದು “ಸರ್ಕಾರಿ ನೌಕರ” ಅಂತಲೂ ಹಾಗೂ ಕೆಲವರು ಖಾಸಗಿ ಕಂಪನಿಗಳಲ್ಲಿ “ಟೈಪಿಸ್ಟ್” ಎಂದು ಉದ್ಯೋಗ ಪಡೆದು ಜೀವನ ಸಾಗಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿಯೂ ಕೂಡ ವಿದ್ಯಾವಂತ ಪದವೀಧರರು ಜಾಬ್ ಟೈಪಿಂಗ್ ಎಂಬ ಸ್ವಉದ್ಯೋಗ ಮಾಡಿ ಜೀವನ ಸಾಗಿಸಿರುತ್ತಾರೆ. ಇದಕ್ಕೊಂದು ಉದಾಹರಣೆ ಎಂಬಂತೆ ಭಟ್ಕಳದ ಹುರುಳಿಸಾಲ್ ನಿವಾಸಿಯಾದ ಮಹೇಶ ಆರ್.ನಾಯ್ಕ ಭಟ್ಕಳದ ಅಂಜುಮನ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ತಮ್ಮ ಬಿ.ಎ.,ಪದವಿಯನ್ನು ಮುಗಿಸಿದ ನಂತರ ಜೀವನೋಪಾಯಕ್ಕಾಗಿ ಖಾಸಗಿ ಬಸ್ ಏಜೆಂಟ್ ಆಗಿ ನಂತರದಲ್ಲಿ, ಎಸ್.ಟಿ.ಡಿ. ಬೂತ್‌ನಲ್ಲಿ ಕೆಲಸಕ್ಕಿದ್ದು, ಪ್ರತಿ ದಿನಕ್ಕೆ ಮುಕ್ಕಾಲು ಗಂಟೆಯ ಸಮಯವನ್ನು ಮದ್ಯಾಹ್ನದ ಊಟದ ಬಿಡುವಿನಲ್ಲಿ ಭಟ್ಕಳ ಬಂದರ್ ರಸ್ತೆಯ ೨ ನೇ ಕ್ರಾಸ್‌ನಲ್ಲಿದ್ದ ಟೈಪಿಂಗ್ ಕ್ಲಾಸ್‌ಗೆ ಸೇರಿ ಜ್ಯೂನಿಯರ್ ಇಂಗ್ಲೀಷ್ ಟೈಪಿಂಗ್ ತರಬೇತಿಯನ್ನು ಪಡೆದಿದ್ದರು. ಆ ನಂತರ ೧೯೯೭ನೇ ಇಸ್ವಿಯಲ್ಲಿ ಅವರೇ ಖುದ್ದಾಗಿ “ನಿರುದ್ಯೋಗಿ ಪದವೀಧರ” ಕೋಟಾದಡಿಯಲ್ಲಿ ಸಾರ್ವಜನಿಕ ದೂರವಾಣಿ ಕೇಂದ್ರ (ಎಸ್.ಟಿ.ಡಿ.,) ಕ್ಕಾಗಿ ಅರ್ಜಿ ಸಲ್ಲಿಸಿ,ಅದರಲ್ಲಿ ಯಶಸ್ವಿಯಾಗಿ ಭಟ್ಕಳದ ರಂಗೀಕಟ್ಟೆಯಲ್ಲಿ ಒಂದು ಬಾಡಿಗೆ ಅಂಗಡಿಯಲ್ಲಿ ಎಸ್‌ಟಿಡಿ ಬೂತ್ ಹಾಗೂ ಅದರಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಜಾಬ್ ಟೈಪಿಂಗ್ ಸ್ವಉದ್ಯೋಗವನ್ನು ಆರಂಭಿಸಿ ತಮ್ಮ ಜೀವನವನ್ನು ಸಾಗಿಸಿದರು.
ಕನ್ನಡ ಮತ್ತು ಇಂಗ್ಲೀಷ್ ಜಾಬ್ ಟೈಪಿಂಗ್ ಹೆಚ್ಚಾಗಿ ರಂಗೀಕಟ್ಟೆಯಲ್ಲಿದ್ದ ಜೆ.ಎಂ.ಎಫ್.ಸಿ.,ನ್ಯಾಯಾಲಯದ ವಕೀಲರ ಕೆಲಸಗಳೇ ಜಾಸ್ತಿಯಾಗಿ ಬರುತ್ತಿದ್ದವು.ಅದನ್ನು ಸುಮಾರು ೪ ವರ್ಷಗಳ ಕಾಲ ಬೆರಳಚ್ಚು ಯಂತ್ರದ ಮೂಲಕ ಅವರ ಸಹೋದರನೊಂದಿಗೆ ನಡೆಸಿಕೊಂಡು ಬಂದರು. ಅವರ ಜೀವನದ ಪ್ರತಿಯೊಂದು ದುಡಿಮೆಯು ಬೆರಳಚ್ಚು ಯಂತ್ರದ ಮೂಲಕವೇ ಆಗಿರುತ್ತದೆ.
ಇದಲ್ಲದೇ ಮಹೇಶ ನಾಯ್ಕ ಇದೇ ಬೆರಳಚ್ಚು ಯಂತ್ರದ ಮೂಲಕ ಗಳಿಸಿದ ಅಲ್ಪಸ್ವಲ್ಪ ಹಣದಿಂದಲೇ ಹುಬ್ಬಳ್ಳಿಯ ಜಿ.ಕೆ.ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ವಿದ್ಯಾಭ್ಯಾಸವನ್ನು ಮಾಡಿ ಭಟ್ಕಳದ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಕೀಲರಾಗಿ ವೃತ್ತಿ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ. ಅವರು ಈಗಲೂ ಕೂಡ ತಮ್ಮ ಜೀವನೋಪಾಯದ ಅಡಿಗಲ್ಲಾದ ಬೆರಳಚ್ಚು ಯಂತ್ರವನ್ನು ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ಅವರು ಈಗ ಭಟ್ಕಳದಲ್ಲಿ ನೋಟರಿ ಪಬ್ಲಿಕ್ ಆಗಿ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಅದೇ ರೀತಿ ಭಟ್ಕಳದ ತಹಶೀಲ್ದಾರ ಕಛೇರಿಯ ಜಗಲಿಕಟ್ಟೆಯಲ್ಲಿ ಹಲವಾರು ವರ್ಷಗಳಿಂದ ಬೆರಳಚ್ಚು ಯಂತ್ರದ ಮೂಲಕ ಕಛೇರಿಗೆ ಬರುವ ಸಾರ್ವಜನಿಕರಿಗೆ ಅರ್ಜಿ ವಗೈರೆಗಳನ್ನು ಮಾಡಿಕೊಂಡು ಬರುತ್ತಿರುವ ಜಟ್ಟಪ್ಪ ನಾಯ್ಕ ಇವರೂ ಕೂಡ ತಮ್ಮ ಬದುಕನ್ನು ಬೆರಳಚ್ಚು ಯಂತ್ರದ ಮೂಲಕವೇ ಸಾಗಿಸುತ್ತಿದ್ದಾರೆ.
ಒಂದು ಬೆರಳಚ್ಚು ಯಂತ್ರದ ಮೂಲಕ ನಮ್ಮ ದೇಶದಲ್ಲಿ ಬದುಕು ಕಟ್ಟಿಕೊಂಡ ಕೋಟ್ಯಂತರ ಜನರಿಗೆ ಶುಭಾಶಯಗಳನ್ನು ಕೋರುತ್ತೇವೆ.