ಬೀದಿನಾಯಿಗಳ ನಿಯಂತ್ರಣಕ್ಕೆ 47 ಲಕ್ಷ; ಬೆಳಗಾವಿ ಪಾಲಿಕೆಯತ್ತ ಸಂಶಯದ ಕಣ್ಣು

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಬೀದಿನಾಯಿಗಳ ನಿಯಂತ್ರಣಕ್ಕೆ 47 ಲಕ್ಷ ರೂ ಖರ್ಚು ಮಾಡಿದ್ದು, ಎಲ್ಲರೂ ಸಂಶಯದಿಂದ ನೋಡುವ ಹಾಗೆ ಆಗಿದೆ.
ಮಹಾನಗರದಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಕಳೆದ ಮೂರು ವರ್ಷಗಳಲ್ಲಿ 47ಲಕ್ಷ ರೂ ಖರ್ಚು ಮಾಡಿದೆ. ಹೀಗಿದ್ದರೂ ನಗರದಲ್ಲಿ ಬೀದಿನಾಯಿಗಳ ಹಾವಳಿ ಮಾತ್ರ ನಿಂತಿಲ್ಲ. ಮಹಾನಗರ ಪಾಲಿಕೆ ಖರ್ಚಿನ ಲೆಕ್ಕದ ಬಗ್ಗೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಮೂರು ವರ್ಷಗಳಲ್ಲಿ ನಾಯಿಗಳ ಸ್ಥಳಾಂತರಕ್ಕೆ ಮಾಡಲಾದ ಖರ್ಚಿನ ಬಗ್ಗೆ ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಕೇಳಿದ ಮಾಹಿತಿಗೆ ಮಹಾನಗರ ಪಾಲಿಕೆ ಅಧಿಕಾರಿಗಳೇ ಲೆಕ್ಕವನ್ನು ನೀಡಿದ್ದಾರೆ. 2014-15 ಸಾಲಿನಲ್ಲಿ 25.62 ಲಕ್ಷ ಖರ್ಚು ಮಾಡಿ 3,944 ನಾಯಿಗಳ ಸ್ಥಳಾಂತರ ಮಾಡಲಾಗಿದೆ. 2017-18 ಸಾಲಿನಲ್ಲಿ 6.97 ಲಕ್ಷ ಖರ್ಚು ಮಾಡಿ 972 ನಾಯಿಗಳನ್ನು ಸ್ಥಳಾಂತರ ಮಾಡಲಾಗಿದೆ. 2019-20ರಲ್ಲಿ 14.95 ಲಕ್ಷ ಖರ್ಚು ಮಾಡಿ 1,598 ಬೀದಿ ನಾಯಿಗಳನ್ನು ನಗರಿಂದ ಸ್ಥಳಾಂತರ ಮಾಡಲಾಗಿದೆ.
ಖರ್ಚುಆರ್ಟಿಐ ಮಾಹಿತಿ ಅಡಿ ಪ್ರತಿ ನಾಯಿ ಸ್ಥಳಾಂತರಕ್ಕೆ 730 ರೂ. ವೆಚ್ಚ ಮಾಡಲಾಗಿದೆ. ಹೀಗಿದ್ದರೂ ನಗರದಲ್ಲಿ ನಾಯಿಗಳ ಹಾವಳಿ ನಿಂತಿಲ್ಲ. ಬೀದಿ ನಾಯಿಗಳ ಸ್ಥಳಾಂತರ ಹೆಸರಿನಲ್ಲೂ ಅವ್ಯವಹಾರ ನಡೆದಿರಬಹುದು. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು ಎಂದು ಭೀಮಪ್ಪ ಗಡಾದ್ ಆಗ್ರಹಿಸಿದ್ದಾರೆ.