ಚಿಕ್ಕಮಗಳೂರುಜಿಲ್ಲಾ ಸುದ್ದಿ

ಕಾಫಿನಾಡಿನ ಹಳ್ಳಿಯೊಳಗೊಂದು ಕೌತುಕ; ಕಾಫಿ ಗಿಡಗಳಲ್ಲಿ ಸತತ ಏಳನೇ ಬಾರಿ ಹೂವು!

ವಿಶೇಷ ವರದಿ: ಕಿರುಗುಂದ ರಫೀಕ್

ಚಿಕ್ಕಮಗಳೂರು: ಕಾಫಿಗಿಡಗಳಲ್ಲಿ ಸಾಮಾನ್ಯವಾಗಿ ವರ್ಷಕ್ಕೆ ಒಂದೆರಡು ಬಾರಿ ಹೂ ಅರಳುತ್ತವೆ. ಇದರ ಹೊರತಾಗಿ ಅಪರೂಪಕ್ಕೆ ಮಳೆ ಸಿಂಚನವಾದರೆ ಮಾತ್ರ ಗಿಡಗಳಲ್ಲಿ ಅಲ್ಲೊಂದು ಇಲ್ಲೊಂದು ಹೂವಾಗುವುದು ಕಾಣಬಹುದು. ಆದರೆ ಇಲ್ಲಿ ಹಾಗಿಲ್ಲ. ಮನೆಯೊಂದರ ಸುತ್ತ ಬೆಳೆದ ಕಾಫಿ ಗಿಡಗಳಲ್ಲಿ ಸತತ ಏಳನೇ ಬಾರಿ ಹೂವಾಗಿದ್ದು ಅಚ್ಚರಿ ಮೂಡಿಸಿದೆ!

ಹೌದು. ಮಲೆನಾಡಿನ ಫಲ್ಗುಣಿ ಗ್ರಾಮದ ಮಹೇಂದ್ರಕುಮಾರ್ ಎಂಬುವರು ತಮ್ಮ ಮನೆಯ ಸುತ್ತ ಬೆಳೆದಿರುವ ಕಾಫಿಗಿಡಗಳಲ್ಲಿ ಸತತ ಏಳನೇ ಬಾರಿ ಹೂವಾಗಿದೆ. ಮೊದಲ ಮಳೆಯಲ್ಲಿ ಸಾಕಷ್ಟು ಹೂ ಅರಳಿದ್ದು ಅದಾಗಲೇ ಕಾಯಿಗಟ್ಟಿ ಫಸಲು ಬಿಟ್ಟಿವೆ. ಬಳಿಕ ಆಗಾಗ ಸುರಿಯುತ್ತಿರುವ ಮಳೆಯ ಸಂದರ್ಭಗಳಲ್ಲಿ ಸತತವಾಗಿ ಏಳನೇ ಬಾರಿ ಹೂ ಬಿಟ್ಟಂತಾಗಿದೆ. ಹೀಗೆ ಕೆಲವೇ ದಿನಗಳ ಅಂತರದಲ್ಲಿ ಗಿಡಗಳಲ್ಲಿ ಹಂತ ಹಂತವಾಗಿ ಹೂಗಳು ಸೃಷ್ಟಿಯಾಗುತ್ತಿರುವುದಲ್ಲದೆ, ಗಿಡಗಳ ತುಂಬಾ ಕಾಫಿ ಇಳುವರಿ ಹೆಚ್ಚಾಗತೊಡಗಿದೆ. ಇದನ್ನು ಕಂಡು ಸ್ಥಳೀಯರು, ಅಕ್ಕಪಕ್ಕದ ತೋಟದ ಮಾಲೀಕರು ಹುಬ್ಬೇರಿಸಿದ್ದಾರೆ.

ಮಹೇಂದ್ರಕುಮಾರ್ ಅವರು ಜಾಗೃತ ಮತದಾರರ ವೇದಿಕೆ ಎಂಬ ಸಂಘಟನೆ ಹುಟ್ಟುಹಾಕಿ ಮತದಾರರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತ ಬಂದಿದ್ದಾರೆ. ಬಡವರಿಗೆ ಕೈಲಾದ ಸೇವೆ ಮಾಡುವಂತಹ ಮನೋಭಾವ ಹೊಂದಿದ್ದಾರೆ. ಈ ಹಿಂದೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಉದ್ಯೋಗ ಮಾಹಿತಿ ಕೇಂದ್ರ ನಡೆಸುತ್ತಿದ್ದರು. ಕಳೆದ ಲಾಕ್ಡೌನ್ ಸಂದರ್ಭ ಸ್ವಂತ ಊರು ಮೂಡಿಗೆರೆಯ ಫಲ್ಗುಣಿಗೆ ಬಂದಿದ್ದಾರೆ. ಸ್ವಲ್ಪ ಜಮೀನು ಹೊಂದಿದ್ದಾರೆ. ಆದರೆ ಹಿಂದೆಂದೂ ಕೃಷಿ ಚಟುವಟಿಕೆ ಮಾಡಿದ ಅನುಭವ ಇವರಿಗಿಲ್ಲ. ಲಾಕ್ಡೌನ್ನಲ್ಲಿ ಮನೆಯಲ್ಲಿದ್ದಾಗ ಇವರಿಗೆ ಇದ್ದಕ್ಕಿದ್ದಂತೆ ಮೈಮುರಿದು ದುಡಿಯಬೇಕೆಂಬ ಛಲ ಹುಟ್ಟಿದೆ. ಮನೆಯ ಸುತ್ತಲಲ್ಲಿ ಬೆಳೆದಿದ್ದ 90ಕ್ಕೂ ಹೆಚ್ಚು ರೋಬಸ್ಟಾ ಕಾಫಿ ಗಿಡಗಳನ್ನು ನಿರ್ವಹಣೆ ಮಾಡಿದ್ದಾರೆ. ಅಲ್ಲದೆ ಹಾಗೆಯೇ ಗಿಡಗಳಲ್ಲಿ ಸಾಕಷ್ಟು ಇಳುವರಿಯೂ ಲಭಿಸಿದೆ.
ಇಲ್ಲಿ ಹಲವು ಅಚ್ಚರಿಗಳು ನಡೆದಿವೆ!

ಕಳೆದ ಬಾರಿ ಫಸಲು ಲಭ್ಯವಾಗಿದ್ದ ಗಿಡಗಳಲ್ಲಿ ಕಾಫಿಹಣ್ಣನ್ನು ಸಂಪೂರ್ಣ ಹುಡುಕಿ ಕೊಯ್ದ ಮೇಲೂ ದಿನಗಳೆದಂತೆ ಕಾಫಿ ಹಣ್ಣುಗಳು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿವೆ. ಇದನ್ನು ಕಣ್ಣಾರೆ ಕಂಡವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಯಾರ ಮನೆಯೊಳಗೂ ಪ್ರವೇಶಸದ ಅಳಿಲುಗಳು ಇವರ ಮನೆಯೊಳಗೆ ಕಾಣಿಸುತ್ತವೆ. ಮನೆಯ ಮೇಲ್ಭಾಗದಲ್ಲಿ ಗರುಡ ಪಕ್ಷಿಯ ಹಾರಾಟ, ಅಂಗಳದಲ್ಲಿ ಕಾಣಿಸುವ ಗೋದಿಸರ್ಪ. ಇವೆಲ್ಲ ನಿದರ್ಶನಗಳನ್ನು ನೋಡಿದರೆ ಮಹೇಂದ್ರಕುಮಾರ್ ಅವರ ಮನೆಯೇ ಕುತೂಹಲದ ಕೇಂದ್ರಬಿಂದು. ಆಸ್ತಿಕರ ಪಾಲಿಗಂತೂ ಈ ಮನೆಯು ದೈವಶಕ್ತಿಯ ತಾಣದಂತೆ ಗೋಚರಿಸದೇ ಇರಲಾರದು.
————-

“ಮನುಷ್ಯನ ಊಹೆಗೆ ನಿಲುಕದ ಎಷ್ಟೋ ಸಂಗತಿಗಳು, ಅಚ್ಚರಿಗಳು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಜಗತ್ತಿನಲ್ಲಿ ನಡೆಯುತ್ತಿರುತ್ತವೆ. ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಹಾಗೆಯೇ ದೇವರನ್ನೂ ನಂಬಬೇಕು. ದೈವಶಕ್ತಿಯಿಂದಲೇ ವಿಜ್ಞಾನ ಸೃಷ್ಟಿಯಾಗಿದೆ. ಹೀಗಾಗಿ ನಡೆಯುವ ಅಚ್ಚರಿಗಳಿಗೆ ಕಾರಣ ಹುಡುಕಬೇಕಾಗಿಲ್ಲ”
-ಮಹೇಂದ್ರ ಕುಮಾರ್ ಫಲ್ಗುಣಿ

Spread the love

Related Articles

Leave a Reply

Your email address will not be published. Required fields are marked *

Back to top button