ಕಲಬುರ್ಗಿಕೃಷಿಜಿಲ್ಲಾ ಸುದ್ದಿವಿಶೇಷ

3 ಎಕ್ಕರೆಯಲ್ಲಿ 16 ಬಗೆಯ ಬೆಳೆ: ನೌಕರಸ್ಥರಂತೆ ತಿಂಗಳ ಆದಾಯ ಪಡೆಯುತ್ತಿರುವ ಕಲಬುರಗಿ ರೈತ

ವರದಿ : ವೀರೇಶ ಚಿನಗುಡಿ

ಕಲಬುರಗಿ: ಸಕಾಲಕ್ಕೆ ಮಳೆ ಬಾರದೆ ಬೆಳೆ ಹಾನಿಯಾಗಿ ಕೈಸುಟ್ಟುಕೊಳ್ಳುವ ಬಿಸಿಲೂರಿನ ರೈತರ ನಡುವೆ ಇಲ್ಲೋರ್ವ ರೈತ ಮಿಶ್ರಬೆಳೆ ಬೆಳೆಯುವ ಮೂಲಕ ಪ್ರಗತಿಪರ ರೈತನಾಗಿ ಹೊರಹೊಮ್ಮಿದ್ದಾನೆ. ಈ ರೈತನಿಗೆ ಸಾಥ್ ಕೊಟ್ಟಿದ್ದು ಯೂಟ್ಯೂಬ್ ಅನ್ನೋದು ಇಲ್ಲಿ ಮತ್ತೊಂದು ವಿಶೇಷ.

ಬಿಸಿಲೂರು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ತರಕಸಪೇಠ ಗ್ರಾಮದ ಶರಣಗೌಡ ಎಂಬ ರೈತ ಮಿಶ್ರಬೆಳೆ ತೆಗೆಯುವ ಮೂಲಕ ಇತರೆ ರೈತರಿಗೆ ಮಾಧರಿಯಾಗಿದ್ದಾರೆ. ತಮ್ಮ ಮನೆ ಆವರಣದಲ್ಲಿಯೇ ಮೂರು ಎಕರೆ ಜಮೀನು ಹೊಂದಿರುವ ಶರಣಗೌಡ, ಈ ಮುಂಚೆ ಎಲ್ಲಾ ರೈತರಂತೆ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು ಹಾನಿ ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ ಸರಿಯಾಗಿ ಮಳೆ ಬರುವದಿಲ್ಲ, ಮಳೆ ಬಂದು ಉತ್ತಮ ಬೆಳೆ ಬಂದರೂ ಆ ವರ್ಷ ಬೆಲೆ ಇರುವದಿಲ್ಲ ಹೀಗಾಗಿ ಪ್ರತಿ ವರ್ಷ ಇಲ್ಲಿನ ರೈತರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಶರಣಗೌಡ ಏನಾದರೂ ಹೊಸ ಸಾಧನೆ ಮಾಡಬೇಕೆಂಬ ಹಂಬಲದಿಂದ ಯೂಟ್ಯೂಬ್ ಸರ್ಚ್ ಮಾಡಿ ಕೃಷಿ ಸಂಬಂಧಿತ ವಿಡಿಯೋಗಳನ್ನು ನೋಡಿದ್ದಾರೆ. ಹಲವರು ಮಿಶ್ರ ಬೆಳೆ ಬೆಳೆದು ಯಶಸ್ವಿಯಾಗಿದ್ದನ್ನು ನೋಡಿದ ಶರಣಗೌಡ ತಾವು ಕೂಡಾ ಮಿಶ್ರ ಬೆಳೆಗೆ ಕೈಹಾಕಿ ನೀರಿಕ್ಷೆಯಂತೆ ಯಶಸ್ವಿಯಾಗಿದ್ದಾರೆ.

ಮೂರು ಎಕ್ಕರೆಯಲ್ಲಿ 16 ಬೆಳೆ :

ಶರಣಗೌಡ ತಮ್ಮ ಮೂರು ಎಕ್ಕರೆ ಜಮೀನಿನಲ್ಲಿಯೇ ಅರಣ್ಯ ಕೃಷಿ, ತೋಟಗಾರಿಕೆ ಕೃಷಿ‌ ಮಾಡಿ ಸೈ ಎನಿಸಿಕೊಂಡಿದ್ದಾರೆ‌‌. ಯೂಟ್ಯೂಬ್ ಜೊತೆಗೆ ಸ್ಥಳಿಯ ತೋಟಗಾರಿಕೆ ಅಧಿಕಾರಿಗಳ ಮಾರ್ಗದರ್ಶನ ಪಡೆದು ಸಮಗ್ರ ಕೃಷಿ ಮಾಡುತ್ತಿದ್ದಾರೆ. 150 ಮಾವು, 900 ಶ್ರೀಗಂಧ, 200 ಸಪೋಟಾ, 180 ಲಿಂಬೆ, 200 ಹೆಬ್ಬೇವು, 180 ನೇರಳೆ, 180 ಸೀತಾಫಲ, 200 ಸೀಬೆ, 200 ನೆಲ್ಲಿ ಗಿಡ, 200 ಮಹಾಗನಿ, 20 ಮಸಾಲ ಚಕ್ಕಿ ಗಿಡ, 180 ರೋಜ್ ವುಡ್, ಹೀಗೆ 16 ವಿವಿಧ ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರ ಜೊತೆಗೆ ತರಕಾರಿ ಸಹ ಬೆಳೆಯುತ್ತಿದ್ದಾರೆ.

ನೌಕರಸ್ತರಂತೆ ತಿಂಗಳಿಗೆ ಆಧಾಯ:

ಸಾಮಾನ್ಯವಾಗಿ ರೈತರಿಗೆ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಆಧಾಯ ಬರುತ್ತದೆ. ಆದರೆ ಇವರು ಹಾಗಲ್ಲ ವಿವಿಧ ನಮೂನೆಯ ಹಣ್ಣು, ತರಕಾರಿ ಇರೋದರಿಂದ ಆಯಾ ಸಿಜನ್ ಗೆ ತಕ್ಕಂತೆ ಹಣ್ಣು ತರಕಾರಿ ಮಾರಾಟ ಮಾಡಿ ಕೈ ತುಂಬ ಸಂಪಾಧನೆ ಮಾಡುತ್ತಿದ್ದಾರೆ. ಪ್ರತಿ ತಿಂಗಳಿಗೆ ಕನಿಷ್ಠ ಅಂದರೂ 20 ಸಾವಿರ ರೂಪಾಯಿ ಆಧಾಯ ಪಡೆಯುತ್ತಿದ್ದಾರಂತೆ. ಇವರ ಬೇಸಾಯಿ ಪದ್ಧತಿಯನ್ನು ಕಂಡು ಕೃಷಿ ಇಲಾಖೆ “ಸಮಗ್ರ ಕೃಷಿಕ” ಎಂಬ ಬಿರುದು ಕೊಟ್ಟು ಗೌರವಿಸಿದೆ.

ಕೇವಲ ಮೂರು ಎಕ್ಕರೆಯಲ್ಲಿ ಪ್ರತಿ ತಿಂಗಳ ಆಧಾಯ ಒಂದಡೆಯಾದರೆ ಅರಣ್ಯ ಕೃಷಿ ಮೂಲಕ ವಾರ್ಷಿಕ ಆಧಾಯದ ನೀರಿಕ್ಷೆಯಲ್ಲಿಯೂ ಶರಣಗೌಡ ಇದ್ದಾರೆ. ಮನಸ್ಸಿದ್ದರೆ ಮಾರ್ಗ ಅನ್ನೋತರಾ ಕೇವಲ ಎಸ್‌ಎಸ್‌ಎಲ್‌ಸಿ ಓದಿದ ಇವರು, ಸಾಮಾಜಿಕ ಜಾಲತಾಣ ಯೂಟ್ಯೂಬ್ ಸಮರ್ಪಕ ಬಳಕೆ ಹಾಗೂ ಸ್ಥಳಿಯ ಅಧಿಕಾರಿಗಳ ಸಲಹೆ ಮೂಲಕ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಪ್ರಗತಿಪರ ರೈತನೆಂಬ ಬಿರುದಿಗೆ ಪಾತ್ರರಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button