ಎಣ್ಣೆ ಪಾರ್ಸಲ್ ಮುಂದೂಡಿಕೆ : ಲಾಕ್ ಡೌನ್ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ..!

– ಕಿರುಗುಂದ ರಫೀಕ್
ಚಿಕ್ಕಮಗಳೂರು: ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಆಗಾಗ ತರಹೇವಾರಿ ನಿಯಮಗಳನ್ನು ಬದಲಾಯಿಸುತ್ತಿದ್ದು, ಎಣ್ಣೆಪ್ರಿಯರು ಮಾತ್ರ ನಿರಾಳರಾಗಿದ್ದಾರೆ! ಯಾವೆಲ್ಲ ಅಗತ್ಯ ವಸ್ತುಗಳು ಸಿಗಲಿ, ಬಿಡಲಿ ಎಣ್ಣೆ (ಮದ್ಯ) ಇರುತ್ತಲ್ಲಾ… ಅಷ್ಟು ಸಾಕು ಎನ್ನುತ್ತಿದ್ದಾರೆ. ಕೊರೋನಾ ಪಾಸಿಟಿವಿಟಿ ದರ ಹೆಚ್ಚಾದರೇನು, ಕಡಿಮೆಯಾದರೇನು.., ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರುವ ಟೈಮಿನಲ್ಲಿ ಎಣ್ಣೆ ಪಾರ್ಸಲ್ ಮುಂದುವರಿಸಿರುವ ಸರ್ಕಾರಕ್ಕೆ ಮದ್ಯಪ್ರಿಯರು ಕೈಮುಗಿದು ನಮಸ್ಕರಿಸುತ್ತಿದ್ದಾರೆ.
ಇನ್ನು ನಿರಂತರ ಲಾಕ್ ಡೌನ್ ನಲ್ಲಿ ಜವಳಿ ಅಂಗಡಿ ಇಲ್ಲದೆ ಜನ ಹೊಸಬಟ್ಟೆ ಖರೀದಿಯನ್ನೇ ಮರೆತಿದ್ದಾರೆ. ಹರಿದ ಬಟ್ಚೆಗೆ ಸ್ಟಿಚ್ ಹಾಕಿಸಿಕೊಳ್ಳಲು ಟೈಲರ್ ಗಳೂ ಇಲ್ಲ. ಗಂಡಸರಿಗೆ ಸಲೂನ್ ಇಲ್ಲದೆ ಸೆಲ್ಫ್ ಸೇವಿಂಗ್ ತಲೆಬಿಸಿ. ಹುಡುಗಿಯರಿಗೆ ಬ್ಯೂಟಿ ಪಾರ್ಲರ್ ಇಲ್ಲ. ಎಲ್ಲರೂ ಮಾಸ್ಕ್ ಧರಿಸುತ್ತಿರುವುದಕ್ಕೆ ಕಾರಣ ಕೊರೋನಾದ ಭಯವೊಂದೇ ಅಲ್ಲ! ಮುಖ ಮುಚ್ಚಿಕೊಳ್ಳಲೆಂದೇ ಎಷ್ಟೋ ಮಂದಿ ಮಾಸ್ಕ್ ಧರಿಸುತ್ತಿದ್ದಾರೆ.
ಇದು ಒಂದೆಡೆಯಾದರೆ, ಔಷಧಿ, ದಿನಸಿ, ತರಕಾರಿ ತರಲು ವಾಹನ ಬಳಸದೆ ಕಾಲ್ನಡಿಗೆಯಲ್ಲಿ ಹೋಗಬೇಕಾದ್ದರಿಂದ ಎಲ್ಲರ ಚಪ್ಪಲಿ ಸವೆದು ಹೋಗಿವೆ. ಹೊಸ ಚಪ್ಪಲಿ ಖರೀದಿಸಲು ಚಪ್ಪಲಿ ಅಂಗಡಿಗಳೂ ತೆರೆದಿಲ್ಲ. ಲಾಕ್ ಡೌನ್ ಜೊತೆಗೆ ಎಲ್ಲೆಡೆ ಮಳೆ ಅಬ್ಬರಿಸತೊಡಗಿದೆ.
ಛತ್ರಿ ಅಂಗಡಿಗಳೂ ತೆರೆದಿಲ್ಲ. ಬಹುಶಃ ಚಪ್ಪಲಿ ಮತ್ತು ಕೊಡೆ ಅಂಗಡಿಗಳು ತೆರೆದರೆ ಜನ ಅವುಗಳಿಂದ ಬೇಕಾಬಿಟ್ಟಿಯಾಗಿ ಓಡಾಡಬಹುದು ಎಂಬ ಕಾರಣವಿರಬಹುದು! ಹೀಗೆ ಈ ಲಾಕ್ ಡೌನ್ ಎಫೆಕ್ಟ್ ನಿಂದ ಏನೆಲ್ಲಾ ಅವಾಂತರವಾಗಿದೆ ಎಂಬುದನ್ನು ಹೇಳುತ್ತಾ ಹೋದರೆ ಮುಗಿಯೋದೇ ಇಲ್ಲ ಬಿಡಿ!.