ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿ ವೇತನದ 24 ಲಕ್ಷ ರೂ ನಕಲಿ ಖಾತೆಗೆ ಜಮೆ ಮಾಡಿಸಿದ ಕಿಲಾಡಿ ವ್ಯಕ್ತಿ

ಧಾರವಾಡ : ಇಷ್ಟು ದಿನ ಜನರಿಗೆ ಆಸೆ ಅಥವಾ ಭರವಸೆಗಳನ್ನು ತೋರಿಸಿ ವಂಚನೆ ಮಾಡುವದನ್ನು ನೋಡಿದ್ದೇವೆ, ಆದರೆ ಇಲ್ಲೊಬ್ಬ ವ್ಯಕ್ತಿ ಹಿಂದುಳಿದ ಇಲಾಖೆಯಲ್ಲಿ ಕೆಲಸ ಮಾಡುತ್ತಾ, ವಿದ್ಯಾರ್ಥಿಗಳಿಗೆ ಸೇರಬೇಕಾದ ವಿದ್ಯಾರ್ಥಿ ವೇತನವನ್ನೇ, ನಕಲಿ ಖಾತೆ ಜಮೆ ಮಾಡಿಸುವ ಮೂಲಕ ತನ್ನ ಕಿಲಾಡಿ ಬುದ್ಧಿ ತೋರಿಸಿ, ಲಕ್ಷ ಲಕ್ಷ ಹಣ ವಂಚನೆ ಮಾಡಿರುವದು ಬೆಳಕಿಗೆ ಬಂದಿದೆ.
ನಕಲಿ ಖಾತೆ ತೆಗೆದು 24 ಲಕ್ಷ ರೂಪಾಯಿ ವಂಚನೆ ಮಾಡಿರುವಂತಹ ಘಟನೆ, ವಾಣಿಜ್ಯ ನಗರಿ ಹುಬಳ್ಳಿಯ ಹೆಗ್ಗೆರೆ ಆಯುರ್ವೇದಿಕ್ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಗ್ಗೆರೆಯ ಆಯುರ್ವೇದಿಕ್ ಕಾಲೇಜಿನ ಹೆಸರಲ್ಲಿ ಹಿಂದುಳಿದ ವರ್ಗ ಇಲಾಖೆಯ ಸಿಬ್ಬಂದಿ ಯೋರ್ವ ನಕಲಿ ಖಾತೆ ತೆಗೆದಿದ್ದಾನೆ ಎನ್ನಲಾಗಿದೆ. ನಕಲಿ ಖಾತೆ ಸೃಷ್ಟಿಸಿದ ಕಿಲಾಡಿ, ವಿದ್ಯಾರ್ಥಿ ವೇತನವನ್ನು ನಕಲಿ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾನೆ.
2017 – 18 ನೇ ಸಾಲಿನಲ್ಲಿ ವಂಚನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲರ ಖಾತೆಗೆ ವರ್ಗಾಯಿಸುವ ಬದಲು ನಕಲಿ ಖಾತೆಗೆ ಜಮಾ ಮಾಡಿ ವಂಚನೆ ಮಾಡಲಾಗಿದೆ. ಬರೋಬ್ಬರಿ 24 ಲಕ್ಷ ರೂಪಾಯಿ ಪಂಗನಾಮ ಹಾಕಲಾಗಿದೆ. ವಿದ್ಯಾರ್ಥಿಗಳಿಗೆ ಬರಬೇಕಿದ್ದ 24,40,090 ರೂಪಾಯಿ ವಿದ್ಯಾರ್ಥಿ ವೇತನ ವಂಚನೆಯಾಗಿದೆ ಎಂದು ಆರೋಪಿಸಲಾಗಿದೆ.
2017 -18, 2018 – 19 ಹಾಗು 2019 – 20 ರ ಸಾಲಿನ ಆಂತರಿಕ ಲೆಕ್ಕ ತಪಾಸಣೆ ಮಾಡಿದಾಗ ವಂಚನೆ ಬಹಿರಂಗಗೊಂಡಿದೆ ಎಂದು ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಒಟ್ಟು 100 ವಿದ್ಯಾರ್ಥಿಗಳಿಗೆ ಬರಬೇಕಿದ್ದ ವಿದ್ಯಾರ್ಥಿ ವೇತನ ಬೇರೆ ಖಾತೆಗೆ ಜಮಾ ಆಗಿದೆ. ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯಾಸಕ್ಕೆಂದು ಬಿಡುಗಡೆಗೊಂಡ ಹಣ ದುರ್ಬಳಕ್ಕೆ ಮಾಡಿಕೊಳ್ಳಲಾಗಿದೆ. ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇವೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.