‘5 ಸಾವಿರ ರೂ.ಗಳ ಪ್ಯಾಕೇಜ್; ಖಾಸಗಿ ಶಾಲಾ ಶಿಕ್ಷಕರ ಮೂಗಿಗೆ ತುಪ್ಪ ಸವರುವ ಕ್ರಮ’

ಕಾರವಾರ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಖಾಸಗಿ ಶಾಲಾ ಶಿಕ್ಷಕರಿಗೆ ಘೋಷಿಸಿರುವ ಐದು ಸಾವಿರ ರೂ.ಗಳ ಪ್ಯಾಕೇಜ್ ಶಿಕ್ಷಕರ ಮೂಗಿಗೆ ತುಪ್ಪ ಸವರಿದಂತೆ ಆಗಿದೆ ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ್ ಅಸೋಸಿಯೇಷನ್ ಅಧ್ಯಕ್ಷ ಎಂ.ಅರ್.ಮಾನ್ವಿ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದಲ್ಲಿ ಖಾಸಗಿ ಶಾಲಾ ಶಿಕ್ಷಕರು ಕೋವಿಡ್ ನಿಂದಾಗಿ ಹಲವಾರು ಕಷ್ಟನಷ್ಟಗಳನ್ನು ಅನುಭವಿಸಿದ್ದಾರೆ.ಈಗಲೂ ಅವರ ಬಳಿ ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ.ಇಂತಹ ಸಂದರ್ಭದಲ್ಲಿ ತುಂಬಾ ಭರವಸೆಗಳನ್ನು ಇಟ್ಟುಕೊಂಡಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಮುಖ್ಯಮಂತ್ರಿಗಳ ಐದು ಸಾವಿರ ರೂ. ಘೋಷಣೆಯಿಂದಾಗಿ ನಿರಾಶೆಯಾಗಿದೆ ಎಂದರು.
ಕನಿಷ್ಠ ಪಕ್ಷ ತೆಲಂಗಾಣ ರಾಜ್ಯದ ಮಾದರಿಯಲ್ಲಿ ಶಿಕ್ಷಕರಿಗೆ ಪ್ರತಿ ತಿಂಗಳು 5000 ಹಾಗೂ 25 ಕೇ.ಜಿ. ಅಕ್ಕಿಯನ್ನು ಕೊಡುವಂತ ಯೋಜನೆ ಘೋಷಿಸಿದ್ದರೆ ಅವರಜೀವನಕ್ಕೆ ಸಹಾಯವಾಗಬಹುದಿತ್ತು. ಅದನ್ನು ಬಿಟ್ಟು ಮುಖ್ಯಮಂತ್ರಿಗಳು ಕೇವಲ ಐದು ಸಾವಿರ ರೂಪಾಯಿ ಕೊಟ್ಟು ಕೈತೊಳೆದುಕೊಂಡಿದ್ದಾರೆ.ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಶಿಯೇಶನ್ ಬೇಸರ ವ್ಯಕ್ತಪಡಿಸಿದೆ.
ಹಲವು ಬಾರಿ ರಾಜ್ಯದ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಈ ಕುರಿತು ಮನವಿಯನ್ನು ಕೂಡ ಅರ್ಪಿಸಲಾಗಿದೆ. ಆದರೆ ಶಿಕ್ಷಕರ ಮತ್ತು ಶಿಕ್ಷಕ ಸಂಘಟನೆಗಳ ಮನವಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಮುಖ್ಯಮಂತ್ರಿಗಳು ಕೇವಲ ಕಣ್ಣೊರೆಸುವ ತಂತ್ರವನ್ನು ಮಾಡಿದ್ದಾರೆ ಎಂದು ಮಾನ್ವಿ ಅವರು ಆರೋಪಿಸಿದ್ದು, ಲಾಕ್ ಡೌನ್ ಆರಂಭವಾದಂದಿನಿಂದ ಇಲ್ಲಿಯವರೆಗೆ ಪ್ರತಿ ತಿಂಗಳು ಕನಿಷ್ಠ 5000 ರೂ. ಹಾಗೂ 25 ಕೇ.ಜಿ.ಅಕ್ಕಿಯನ್ನು ಕೊಡುವ ಯೋಜನೆ ರೂಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.