ಖಾಸಗಿ ಬೀಜ ಕಂಪನಿಯಿಂದ ಮೋಸ; ರೈತ ಆರೋಪ

ರಾಮನಗರ: ಸಿಹಿ ಜೋಳದ ಕಳಪೆ ಬೀಜಗಳನ್ನು ನೀಡುವ ಮೂಲಕ ಬೀಜ ಕಂಪನಿಯೊಂದು ರೈತರಿಗೆ ದ್ರೋಹ ಮಾಡಿರುವುದು ಬೆಳಕಕಿಗೆ ಬಂದಿದೆ.
ಇಂಡಸ್ ಕಂಪನಿ ಕಳಪೆ ಬಿತ್ತನೆ ಬೀಜ ನೀಡಿದ್ದು, ಖರೀದಿ ಮಾಡಿದ ಕಂಪನಿಯೂ ಹಣ ನೀಡದೆ ರೈತರಿಗೆ ಮೋಸ ಮಾಡಿದೆ ಹಾಗಾಗಿ ಕಂಪನಿ ಮೇಲೆ ಕ್ರಮ ಕೈಗೊಳ್ಳುವಂತೆ ನಷ್ಟಕ್ಕೊಳಗದ ರೈತ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರದ ರೈತ ಸುಜೀವನ್ಕುಮಾರ್ ಆಗ್ರಹಪಡಿಸಿದ್ದಾರೆ.
ಎಕರೆಗೆ 25 ಸಾವಿರ ರೂ. ಖರ್ಚು ಮಾಡಿ ರಸಗೊಬ್ಬರ ಹಾಕಿ, ಬೆಳೆ ಬೆಳೆದ ನಂತರ ವೈಕುಕ್ ಎನ್ನುವ ಕಂಪನಿ ಸಮರ್ಪಕವಾಗಿ ಗ್ರೇಡ್ ಮಾಡದೆ ಮೋಸ ಮಾಡಿದ್ದಾರೆ, ಇಲ್ಲಿಂದ ತೆಗೆದುಕೊಂಡು ಹೋದ ಜೋಳಕ್ಕೂ ಹಣ ನೀಡುತ್ತಿಲ್ಲ. ಕಟಾವು ಮಾಡಿ ಗುಡ್ಡೆ ಹಾಕಿದ ಜೋಳವನ್ನು ರಾಶಿ ಹಾಕಿದ್ದೇವೆ. ಅದರಲ್ಲಿ ಅರ್ಧದಷ್ಟೂ ಜೋಳವನ್ನು ತೆಗೆದುಕೊಂಡು ಹೋಗಿಲ್ಲ. ಇದರಿಂದ ಜೋಳ ವ್ಯರ್ಥವಾಗಿದೆ. ಇತ್ತ ಆನೆಗಳು ಅರ್ಧ ಜೋಳವನ್ನು ನಾಶ ಮಾಡಿದ್ದು, ತಮ್ಮ ಜೊತೆಗೆ ಇತರೆ ರೈತರು ಇದರಿಂದ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
ಹಲವು ಸಮಸ್ಯೆಗಳ ನಡುವೆಯೂ ಮೂರು ತಿಂಗಳಿನಿಂದ ಕಷ್ಟಪಟ್ಟು ಬೆಳೆ ಬೆಳೆ ತೆಗೆದಿದ್ದೇವೆ. ಇದೀಗ ಗ್ರೇಡ್ ಮಾಡದೆ ಅರ್ಧದಷ್ಟು ಜೋಳವನ್ನು ವೈಕುಕ್ ಕಂಪನಿ ತಿರಸ್ಕರಿಸಿದೆ. ಬೀಜ ನೀಡಿದ ಕಂಪನಿಯಿಂದಲೂ ಮೋಸವಾಗಿದೆ, ಕಂಪನಿಗಳಿಂದ ಎಕರೆಗೆ 1 ಲಕ್ಷ ರೂ. ನಷ್ಟವಾಗಿದ್ದು, ಅವರೇ ಭರಿಸಬೇಕು, ರಾತ್ರಿವೇಳೆ ಫಸಲು ತುಂಬಿಕೊಂಡು ಹೋಗಿರುವ ವೈಕುಕ್ ಕಂಪನಿಯವರು ಸಮರ್ಪಕವಾದ ತೂಕ ನೀಡುತ್ತಿಲ್ಲ ಜತೆಗೆ ಬಿಲ್ ಸಹ ನೀಡಿಲ್ಲ, ಇಷ್ಟ ಬಂದಂತೆ ಕಳ್ಳತನ ಮಾಡುವಂತೆ ತುಂಬಿಕೊಂಡು ಹೋಗಿದ್ದಾರೆ, ಇದರ ವಿರುದ್ದ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು, ನಷ್ಟಕ್ಕೆ ಕಂಪನಿಯ ವತಿಯಿಂದಲೇ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.