ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದ; ಅನಾಮಧೇಯ ಕರೆಯಿಂದ ಬಯಲಾಯ್ತು ಅಸಲಿಯತ್ತು

ಬಾಗಲಕೋಟೆ: ಪತಿಯೋರ್ವ ತನ್ನ ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ..
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ 40ವರ್ಷದ ಮಹಾದೇವಿ ವಡ್ರಾಲ ಮಹಿಳೆಯನ್ನು ಪತಿ ಹನುಮಂತ ವಡ್ರಾಲ, 14 ವರ್ಷದ ಮಗ ಕೊಲೆಗೈದಿದ್ದು, ಪ್ರಕರಣ ಜಾಡು ಹಿಡಿದು ಹೋದ ವೇಳೆ ಪೊಲೀಸರಿಗೆ ಶಾಕ್ ಆಗಿದೆ.
ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿ,ಮೃತ ಮಹಾದೇವಿ ಅಂತ್ಯಕ್ರಿಯೆ ಕೂಡಾ ಮಾಡಿದ್ದರು. ಆ ಬಳಿಕ ಅನಾಮಧೇಯ ಕರೆ ಮೇರೆಗೆ ಪೊಲೀಸರು ತನಿಖೆ ಕೈಗೊಂಡ ವೇಳೆ ಪ್ರಕರಣದ ಅಸಲಿಯತ್ತು ಬಯಲಾಗಿದೆ.
ಜೂನ್ 7ರ ಮಧ್ಯರಾತ್ರಿ ಮನೆಯಲ್ಲಿ ಪತ್ನಿ ನಿದ್ರೆ ಮಾಡುತ್ತಿರುವಾಗ ಆಕೆಯ ಕುತ್ತಿಗೆ ಬಿಗಿದು ಪತಿ ಕೊಲೆ ಮಾಡುತ್ತಾನೆ. ಕಣ್ಣೆದುರೇ ಅಮ್ಮನನ್ನು ಕೊಲ್ಲುತ್ತಿದ್ದ ಅಪ್ಪನಿಗೆ 14 ವರ್ಷದ ಮಗ ಸಾಥ್ ಕೊಟ್ಟಿದ್ದಾನೆ. ಆ ಬಳಿಕ ಮಹಾದೇವಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಕಟ್ಟಿ ಗ್ರಾಮಸ್ಥರೊಂದಿಗೆ ಸೇರಿ ಅಂತ್ಯಕ್ರಿಯೆ ಕೂಡ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಳಗಿ ಪೊಲೀಸರಿಗೆ ಅನಾಮಧೇಯ ಕರೆ ಬಂದಿದ್ದು, ಆಗ ತುಂಗಳ ಪೊಲೀಸ್ ಬೀಟ್ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡ ವೇಳೆ ಕೊಲೆ ಪ್ರಕರಣ ಬಯಲಾಗಿದೆ. ಮೃತ ಮಹಾದೇವಿ ನಡತೆ, ಹಾಗೂ ಕುಟುಂಬಸ್ಥರೊಂದಿಗೆ ಹೊಂದಾಣಿಕೆ ಇಲ್ಲ ಎಂದು ಕೊಲೆಗೈದಿರುವುದು ಬಗ್ಗೆ ತನಿಖೆ ವೇಳೆ ತಿಳಿದು ಬಂದಿದೆ. ಇನ್ನು ಕೊಲೆಗೈದ ಆರೋಪಿಗಳಿಬ್ಬರನ್ನು ಸಾವಳಗಿ ಪೊಲೀಸರು ಬಂಧಿಸಿದ್ದು ತನಿಖೆ ಮುಂದುವರಿದಿದೆ ಎಂದು ಎಸ್ಪಿ ಲೋಕೇಶ್ ಜಗಲಾಸರ ತಿಳಿಸಿದ್ದಾರೆ.