ಬಾಗಲಕೋಟೆ
ತಾಕತ್ತಿದ್ದರೆ ಚುನಾವಣೆಗೆ ನಿಲ್ಲಲಿ; ಹುನಗುಂದ ಶಾಸಕರ ವಿರುದ್ಧ ವಿಜಯಾನಂದ ಕಾಶಪ್ಪನವರ್ ಸವಾಲು

ಬಾಗಲಕೋಟೆ: ತಾಕತ್ತಿದ್ರೆ 2023ರ ಚುನಾವಣೆಯಲ್ಲಿ ನಿಲ್ಲಲಿ, ಆಗ ನನ್ನ ತಾಕತ್ತು ಏನು ಅಂತ ತೋರಿಸ್ತೀನಿ ಎಂದು ಹುನಗುಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲರಿಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸವಾಲು ಹಾಕಿದ್ದಾರೆ.
ಇಳಕಲ್ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಅವರ ಪುತ್ರ ರಾಜುಗೌಡ ಪಾಟೀಲ ವಿರುದ್ದ ಏಕವಚನದಲ್ಲೇ ಕಾಶಪ್ಪನವರ ವಾಗ್ದಾಳಿ ನಡೆಸಿದರು.
ಕ್ಷೇತ್ರದಲ್ಲಿ ಅಪ್ಪ, ಮಗ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಕ್ಷೇತ್ರದಲ್ಲಿ ಗುಂಡಾಗಿರಿ ನಡೆದಿದೆ. ನಾನು ಮಾಜಿ ಶಾಸಕ. ನನ್ನ ಮೇಲೆಯೇ ಹಲ್ಲೆ ಆಗ್ತಿದೆ. ಶಾಸಕ ಹಾಗೂ ಅವರ ಪುತ್ರನ ಕುಮ್ಮಕ್ಕಿನಿಂದ ನನ್ನ ಮನೆಗೆ ಬಂದು ಹಲ್ಲೆ ಮಾಡ್ತೀವಿ ಅಂತಾರೆ. ಊರಲ್ಲಿ ಹಪ್ತಾ ವಸೂಲಿ ನಡೆದಿದೆ ಎಂದು ಅವರು ಕಿಡಿ ಕಾರಿದರು.
ಬಡವರಿಗೆ ಹತ್ತರ ಬಡ್ಡಿಯಲ್ಲಿ ದುಡ್ಡು ಕೊಡುವ ದಂಧೆ ಇಲ್ಲಿ ನಡೆಯುತ್ತದೆ. ಈ ಬಡ್ಡಿ ವ್ಯವಹಾರ ನಡೆಯಲು ಬಿಟ್ಟವರು ಯಾರು ಎಂದು ಅವರು ಪ್ರಶ್ನಿಸಿದರು.