ಬೆಳಗಾವಿ

ಬೆಳಗಾವಿಯಲ್ಲಿ ವೇದಗಂಗಾ ನದಿಪಾತ್ರಕ್ಕೆ ಜಿಲ್ಲಾಧಿಕಾರಿ ಭೇಟಿ; ತುರ್ತುಸ್ಥಿತಿ ನಿರ್ವಹಣೆಗೆ ಸಿದ್ಧತೆ

ಬೆಳಗಾವಿ: ಕಳೆದ ಮೂರು‌ ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ವೇದಗಂಗಾ ನದಿ ಪಾತ್ರದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ನಿಪ್ಪಾಣಿ ಸಮೀಪದ ಜತ್ರಾಟ ಹಾಗೂ ಅಕ್ಕೋಳ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ವೇದಗಂಗಾ ನದಿ ಹರಿವು ಪ್ರಮಾಣವನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳ ಜತೆ‌ ಚರ್ಚೆ ನಡೆಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ , ನದಿ ನೀರಿನ‌ ಪ್ರಮಾಣ ಹೆಚ್ಚಾದರೆ ಮುಂಜಾಗ್ರತಾ ಕ್ರಮವಾಗಿ ನದಿತೀರದ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಸಂಭವನೀಯ ಪ್ರವಾಹ ‌ಹಾಗೂ ಅತಿವೃಷ್ಟಿಯಂತಹ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ. ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ. ಆದಾಗ್ಯೂ ನದಿಗಳ ನೀರಿನ ಮಟ್ಟ ಹಾಗೂ ಮಳೆಯ ಪ್ರಮಾಣದ ಮೇಲೆ‌ ಸಂಬಂಧಿಸಿದ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು.ನದಿತೀರದ ಗ್ರಾಮಗಳ‌ ಜನರಿಗೆ ಆಗಾಗ ಸೂಕ್ತ ಮುನ್ನೆಚ್ಚರಿಕೆಯನ್ನು ನೀಡಬೇಕು. ಒಂದು ವೇಳೆ ಪ್ರವಾಹ ಸ್ಥಿತಿ ಉದ್ಭವಿಸಿದರೆ ತಡಮಾಡದೇ ಜನರು ಹಾಗೂ ಜಾನುವಾರುಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು.

ಪ್ರವಾಹ ಭೀತಿ ಎದುರಿಸುತ್ತಿರುವ ಜಿಲ್ಲೆಯ 377 ಗ್ರಾಮಗಳ ಜನರನ್ನು ತುರ್ತು ಸಂದರ್ಭದಲ್ಲಿ ಸ್ಥಳಾಂತರಿಸಲು ಅಗತ್ಯವಿರುವ ಕಾಳಜಿ(ಪರಿಹಾರ) ಕೇಂದ್ರಗಳನ್ನು ಈಗಾಗಲೇ ಗುರುತಿಸಲಾಗಿದೆ. ಸಮೀಪದಲ್ಲಿ ಇರುವ ನಿಗದಿತ ಕಾಳಜಿ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಿಸಬೇಕು ಎಂದು ತಹಶೀಲ್ದಾರ ಹಾಗೂ ಇತರೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಿರೇಮಠ ನಿರ್ದೇಶನ ನೀಡಿದರು.

ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್, ನಿಪ್ಪಾಣಿ ತಹಶಿಲ್ದಾರ ಹಾಗೂ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button