ಭಟ್ಕಳದ ಜೋಗಿಮನೆಯಲ್ಲಿ ಕೃತಕ ನೆರೆ: ಮುಳುಗುವ ಭೀತಿಯಲ್ಲಿ ಜನತೆ

ಕಾರವಾರ: ಭಟ್ಕಳ ತಾಲೂಕಿನ ಮುಂಡಳ್ಳಿಯ ಅವೈಜ್ಞಾನಿಕ ಕಿರುಸೇತುವೆಯ ಕಾಮಗಾರಿಯ ಪರಿಣಾಮ ಪಂಚಾಯತಿ ವ್ಯಾಪ್ತಿಯ ಜೋಗಿಮನೆ ಮುಳುಗಡೆ ಭೀತಿ ಎದುರಿಸುತ್ತಿದ್ದು,ಜನರು ಜೀವವನ್ನು ಕೈಯಲ್ಲಿ ಹಿಡಿದು ಬದುಕು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭಟ್ಕಳ ತಾಲೂಕಿನ ಮುಂಡಳ್ಳಿ ಪಂಚಾಯತಿ ವ್ಯಾಪ್ತಿಯ ಜೋಗಿಮನೆ ಸಮುದ್ರದ ಉಪ್ಪು ನೀರು ಹಾಗೂ ಮಳೆ ನೀರಿನಿಂದ ಆವೃತ್ತವಾಗಿದ್ದು, ಕೃತಕ ಕೆರೆಯಂತಾಗಿದೆ. ಮುಂಡಳ್ಳಿಯ ಬಾಬು ಮಾಸ್ತರ ಮನೆಯ ಬಳಿ ಪುಟ್ ಬ್ರಿಡ್ಜ್ (ಕಿರು ಸೇತುವೆ)ಯ ಅವೈಜ್ಞಾನಿಕ ಕಾಮಗಾರಿಯು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ.
ಸೇತುವೆ ನಿರ್ಮಾಣಕ್ಕೆ ತಡೆಗೋಡೆ.ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣವಾಗುತ್ತಿದ್ದ ಕಿರು ಸೇತುವೆ ಕಟ್ಟಲೆಂದು ನದಿ ಬದಿಯ ಸ್ಥಳದಲ್ಲಿ ಒಡ್ಡು ಹಾಕಿ ನೀರು ಒಳ ಬರದಂತೆ ಮಣ್ಣಿನ ತಾತ್ಕಾಲಿಕ ಗೋಡೆಯನ್ನು ನಿರ್ಮಿಸಲಾಗಿದೆ.ಆದರೆ ಸಮುದ್ರದ ಭರತದಲ್ಲಿ ಒಳಗೆ ಬಂದ ನೀರು ಜೋಗಿಮನೆ ಪ್ರದೇಶದತ್ತ ಶೇಖರಣೆ ಯಾಗಲು ಆರಂಭವಾಯಿತು. ಪರಿಣಾಮ ನೀರು ಆ ಪ್ರದೇಶದಲ್ಲಿ ದಿನ ಕಳೆದಂತೆ ಜಾಸ್ತಿ ಆಗುತ್ತಾ ಹೋಯಿತು.
ಒಮ್ಮೆ ಒಳಬಂದ ನೀರು ಹೊರಹೋಗಲು ಸಾಧ್ಯವಾಗದೆ ಅಲ್ಲಿ ನೀರು ನಿಲ್ಲಲು ಆರಂಭವಾಯಿತು.ಕನಿಷ್ಟ ನೀರು ಹೋಗಲು ದೊಡ್ಡ ಪೈಪ್ ಆದರೂ ಅಳವಡಿಸಿದರೆ ಇಷ್ಟೆಲ್ಲಾ ಸಮಸ್ಯೆ ಉದ್ಬವವಾಗುತ್ತಿರಲಿಲ್ಲ ಎನ್ನುತ್ತಾರೆ ಸ್ಥಳೀಯರು.
ಸ್ಥಳೀಯರಾದ ನಾಗಯ್ಯ ದೇವಾಡಿಗ ಮಾತನಾಡಿ, ಇಲ್ಲಿನ ಪ್ರತಿ ಬಾವಿಯ ನೀರಲ್ಲೂ ಉಪ್ಪು ನೀರು ತುಂಬಿದ್ದು, ಕುಡಿಯಲು ಬಿಟ್ಟು ನಿತ್ಯದ ಕಾರ್ಯಗಳಿಗೂ ನೀರು ಉಪಯೋಗಿಸಲು ಆಗುತ್ತಿಲ್ಲ. ಹತ್ತಾರು. ಕಿ.ಮೀ.ದೂರದಿಂದ ನೀರು ತರಬೇಕಿದೆ.ಪಟ್ಟಣಕ್ಕೆ ಹೊಂದಿಕೊಂಡ ಗ್ರಾಮೀಣ ಪ್ರದೇಶ ಇದಾದರೂ ಶಾಸಕರಾಗಲೀ, ಅಧಿಕಾರಿಗಳಾಗಲೀ ಇತ್ತ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವಿದಾಸ ದೇವಾಡಿಗ ಎಂಬುವವರು ಮಾತನಾಡಿ, ನೂರಾರು ಎಕರೆ ಮಲ್ಲಿಗೆ ಹೂವಿನ ತೋಟ ನೀರು ಪಾಲಾಯ್ತು. ದೇವಾಡಿಗ ಸಮುದಾಯದವರೆ ಹೆಚ್ಚಾಗಿ ಇರುವ ಮುಂಡಳ್ಳಿಯ ಜೋಗಿಮನೆಯಲ್ಲಿ ಬಹುತೇಕ ಜನರು ಮಲ್ಲಿಗೆಯ ಕೃಷಿಯನ್ನೆ ನಂಬಿ ಬದುಕು ಸಾಗಿಸುತ್ತಿದ್ದಾರೆ. ಇನ್ನು ಹಲವರು ಭತ್ತ ಬೆಳೆಯುತ್ತಿದ್ದಾರೆ.ಕಳೆದ 10 ದಿನಗಳಿಂದ ಕೃಷಿ ಜಮೀನಿಗೆ ನುಗ್ಗಿದ ನೀರು ಅಲ್ಲೆ ನಿಂತು ನೂರಾರು ಎಕರೆಯಲ್ಲಿ ಬೆಳೆದ ಮಲ್ಲಿಗೆಯ ಗಿಡಗಳ ಬುಡ ಕೊಳೆತು ಹೋಗಿದೆ.ಭತ್ತದ ಬೇಸಾಯ ಮಾಡದ ಸ್ಥಿತಿಗೆ ಜಮೀನುಗಳು ಬಂದು ತಲುಪಿದೆ.ಅಷ್ಟೆ ಅಲ್ಲ ಮನೆಯೊಳಗೆ ನುಗ್ಗಿದ ನೀರು ವಿಷ ಜಂತುಗಳಿಗೆ ಆಹ್ವಾನ ನೀಡುತ್ತಿದ್ದು,ಜನರು ತಮ್ಮ ಮನೆಯ ವಯೋವೃದ್ಧರು, ಮಕ್ಕಳನ್ನು ಜೋಪಾನ ಮಾಡಲು ಹರಸಾಹಸ ಪಡಬೇಕಾಗಿದೆ ಎಂದರು.