ರಾಮನಗರ ರೇಶ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಉಪಹಾರ ವ್ಯವಸ್ಥೆ

ರಾಮನಗರ: ರೇಷ್ಮೆಮಾರುಕಟ್ಟೆಗೆ ಬರುವ ರೈತರು ಮತ್ತು ರೀಲರ್ಸ್ ಗಳನ್ನು ಗಮನದಲ್ಲಿರಿಸಿಕೊಂಡು ಪ್ರತಿನಿತ್ಯ ರಾಮನಗರ ತಾಲ್ಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳು ಬೆಳಗಿನ ಉಪಹಾರ ವ್ಯವಸ್ಥೆ ಮಾಡಿ, ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯ ಆವರಣದಲ್ಲಿ ಒಕ್ಕಲಿಗರ ಸಂಘ, ರಾಮನಗರ ತಾಲ್ಲೂಕು ಇವರ ವತಿಯಿಂದ ರೈತರಿಗೆ ಆಹಾರ ಪೊಟ್ಟಣ ವಿತರಣೆ ಮಾಡಿದ ನಂತರ ಸಂಘದ ಅಧ್ಯಕ್ಷ ಹನುಮೇಲಿಂಗು ಮಾಹಿತಿ ನೀಡಿ ಲಾಕ್ ಡೌನ್ ಮುಗಿಯುವ ವರೆಗೂ ಉಪಹಾರ ವ್ಯವಸ್ಥೆ ಮಾಡಲಾಗುವುದೆಂದರು.
ಕೋವಿಡ್ – 19 ಸಂಕಷ್ಟ ಸಮಯದಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ರೇಷ್ಮೆ ಬೆಳೆಗಾರರಿಗೆ ಬೆಳಿಗ್ಗೆ ಉಪಹಾರ ನೀಡುವ ಮೂಲಕ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಅಳಿಲು ಸೇವೆ ಮಾಡುತ್ತಿದೇವೆ ಎಂದು ಅವರು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎ.ಬಿ.ಚೇತನ್ ಕುಮಾರ್ ಮಾತನಾಡಿ, ಪ್ರತಿನಿತ್ಯ 400 ಜನರಿಗೆ ಉಪಹಾರ ವಿತರಣೆ ಮಾಡಲು ತೀರ್ಮಾನಿಸಲಾಗಿದ್ದು, ಲಾಕ್ ಡೌನ್ ಮುಗಿಯುವ ತನಕ ನಿರಂತರವಾಗಿ ಈ ಸೇವೆ ನಡೆಯಲಿದೆ ಎಂದು ಹೇಳಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಖಜಾಂಚಿ ಎಸ್.ಟಿ.ನಂದೀಶ್, ಸಹಕಾರ್ಯದರ್ಶಿ ಬೈರೇಗೌಡ, ಪದಾಧಿಕಾರಿಗಳಾದ ಕಾಂತರಾಜ್ ಪಟೇಲ್, ಕೆ.ಚಂದ್ರಯ್ಯ, ತಮ್ಮಯ್ಯಣ್ಣ, ಮಂಜುನಾಥ್, ಲೋಹಿತ್ ಬಾಬು, ಆಡಿಟರ್ ಗೋಪಾಲ್, ಜಿಲ್ಲಾ ರೇಷ್ಮೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ರವಿ, ಸೇರಿದಂತೆ ಹಲವರು ಹಾಜರಿದ್ದರು.