ಜಿಲ್ಲಾ ಸುದ್ದಿ

ಸಂಪೂರ್ಣ ಲಾಕ್‌ಡೌನ್‌: ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೈರಾಣಾದ ಜನ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಮೇ.20ರಿಂದ 28ರವರೆಗೆ ಸತತವಾಗಿ ಎಂಟು ದಿನಗಳವರೆಗೆ ಮೆಡಿಕಲ್‌,ಹಾಲು ಮಾರಾಟ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಜಿಲ್ಲಾಡಳಿತ ಸಂಪೂರ್ಣ ಮುಚ್ಚುವಂತೆ ಲಾಕ್‌ಡೌನ್‌ ವಿಧಿಸಿದ್ದು ಇದರಿಂದ ಜಿಲ್ಲೆಯ ಜನ ಹೈರಾಣಾಗಿದ್ದಾರೆ.

ಮೇ.20ರಂದು ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್‌ ಎಂದು ಜಿಲ್ಲಾಡಳಿತ ಘೋಷಿಸಿತ್ತು. ಇನ್ನೇನು 24ರ ನಂತರ ಅಂಗಡಿ ಮುಂಗಟ್ಟುಗಳ ತೆರೆದುಕೊಳ್ಳಲಿದೆ ಎಂದು ನಿಟ್ಟುಸಿರಾಗಿದ್ದ ಜನರಿಗೆ ಮತ್ತೆ ಶಾಕ್‌ ಎದುರಾಯ್ತು. 28ವರೆಗೆ ಲಾಕ್ಡೌನ್‌ ಮುಂದುವರಿಸಿರುವ ಜಿಲ್ಲಾಡಳಿತಕ್ಕೆ ಈಗ ಜನ ಹಿಡಿಶಾಪ ಹಾಕುವಂತಾಗಿದೆ.  ಜನರಿಗೆ ಮನವರಿಕೆಯಾಗುವಂತೆ ಸೂಕ್ತ ಪ್ರಚಾರವಿಲ್ಲದೆ ಏಕಾಏಕಿ ಸಂಪೂರ್ಣ ಲಾಕ್‌ಡೌನ್‌ ಮುಂದುವರಿಸುತ್ತಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೀಗೆ ಸತತ ಎಂಟು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್‌ ಬದಲಿಗೆ ನಡುವೆ ಎರಡು ದಿನಗಳ ಬಿಡುವು ಕೊಟ್ಟಿದ್ದರೆ ಅಗತ್ಯ ವಸ್ತುಗಳನ್ನು ಖರೀದಿಸಲು ಜನರಿಗೆ ಅನುಕೂಲವಾಗುತ್ತಿತ್ತು. ತರಕಾರಿ ಮಾರಾಟ ಮಾಡುವವರು ತಳ್ಳುಗಾಡಿಗಳಲ್ಲಿ ಸಂಚರಿಸಬೇಕು. ದಿನಸಿ ಅಂಗಡಿಗಳು ಹೋಂ ಡೆಲಿವರಿ ಆರ್ಡರ್‌ ಪಡೆದು ಮನೆಮನೆಗೆ ಅಗತ್ಯ ವಸ್ತುಗಳನ್ನು ತಲುಪಿಸಬೇಕೆಂಬ ನಿಯಮ ಹೇರಲಾಗಿದೆ. ಯಾರೂ ವಾಹನಗಳಲ್ಲಿ ಸಂಚರಿಸುವಂತಿಲ್ಲ. ಔಷಧಿ ಮತ್ತು ಹಾಲು ತರಲು ಕಾಲ್ನಡಿಗೆಯಲ್ಲೇ ಸಾಗಬೇಕು.

ಈ ಅವೈಜ್ಞಾನಿಕ ನಿಯಮಗಳಿಂದಾಗಿ ಬಡವರ್ಗದ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.ಎಷ್ಟೋ  ಜನರ ಕೈಯಲ್ಲಿ ಸ್ಮಾರ್ಟ್‌ ಫೋನ್‌ಗಳಿಲ್ಲ. ಇದ್ದರೂ ಆನ್‌ಲೈನ್‌ನಲ್ಲಿ ವ್ಯವಹಾರ ಬಲ್ಲವರೆಷ್ಟಿದ್ದಾರೆ? ಹೀಗಾಗಿ ಈ ಲಾಕ್‌ಡೌನ್‌ನಿಂದ ಜನರಿಗೆ ತೀವ್ರ ಅನಾನುಕೂಲವಾಗಿದೆ.

ಪ್ರಚಾರವೆಂದರೆ ಕೇವಲ ವಾಟ್ಸಾಪ್‌,ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಎಷ್ಟೋ ಮಂದಿ ಲಾಕ್‌ಡೌನಿನ ನಿಯಮಾವಳಿ ತಿಳಿಯದೆ ರಸ್ತೆಗೆ ಇಳಿಯುತ್ತಿದ್ದಾರೆ. ಜನ ರಸ್ತೆಗಿಳಿಯುವುದನ್ನೇ ಕಾದು ಕುಳಿತ ಅಧಿಕಾರಿಗಳ ತಂಡದವರು ಜನರ ಮೇಲೆ ಲಾಠಿ ಬೀಸಿ ನಿಯಂತ್ರಿಸತೊಡಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button