ವಿದ್ಯುತ್ ಮಾರ್ಗ ನಿರ್ವಹಣೆ; ಕೆಲಸ ಖಾಯಂಗೊಳಿಸಲು ಗ್ಯಾಂಗ್​​ಮನ್​ಗಳ ಆಗ್ರಹ

ವಿದ್ಯುತ್ ಮಾರ್ಗ ನಿರ್ವಹಣೆ; ಕೆಲಸ ಖಾಯಂಗೊಳಿಸಲು ಗ್ಯಾಂಗ್​​ಮನ್​ಗಳ ಆಗ್ರಹ
ವರದಿ: ಕಿರುಗುಂದ ರಫೀಕ್ ಚಿಕ್ಕಮಗಳೂರು: ವಿದ್ಯುತ್ ತಂತಿಮಾರ್ಗದ ನಿರ್ವಹಣೆ ಎಂದರೆ ಅಂದುಕೊಂಡಷ್ಟು ಸುಲಭವಲ್ಲ. ಜೀವದ ಹಂಗು ತೊರೆದು ಕೆಲಸ ಮಾಡಬೇಕು. ಮಳೆ, ಗಾಳಿಯನ್ನು ಲೆಕ್ಕಿಸದೆ ವಿದ್ಯುತ್ ಕಂಬದ ಮೇಲೆ ಹತ್ತಿ ವಿದ್ಯುತ್ ತಂತಿಗಳನ್ನು ಸರಿಪಡಿಸುವ ಪವರ್ ಮೆನ್ ಗಳದ್ದು ಒಂದು ರೀತಿ ಸಾಹಸದ ಕೆಲಸವಾದರೆ, ಅವರ ಜತೆಯಲ್ಲೇ ಸಹಾಯಕರಾಗಿ ಕೆಲಸ ಮಾಡುವ ಗ್ಯಾಂಗ್ ಮೆನ್ ಕೆಲಸವೂ ದುಸ್ಸಾಹಸದಿಂದ ಕೂಡಿರುತ್ತದೆ. ವಿದ್ಯುತ್ ತಂತಿಗಳಿಗೆ ತಗಲುವ ಮರದ ರೆಂಬೆಗಳನ್ನು ಕಡಿಯುವುದು ಹಾಗೂ ವಿದ್ಯುತ್ ಕಂಬಗಳನ್ನು ನೆಡುವಾಗ ಗುಂಡಿತೆಗೆಯಲು ಸಹಾಯಕ್ಕಾಗಿ ಗ್ಯಂಗ್​ಮನ್ ಗಳಿರುತ್ತಾರೆ. ಇವರು ಮಳೆಗಾಲ ಪೂರ್ವ ತಯಾರಿ ವೇಳೆ ಮೈಮುರಿದು, ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುತ್ತಾರೆ. ವಿದ್ಯುತ್ ಮಾರ್ಗವನ್ನು ಅಡೆತಡೆಗಳಿಲ್ಲದೆ ಸುಗಮಗೊಳಿಸುವ ಕಾರ್ಯದಲ್ಲಿ ಇವರ ಪಾತ್ರ ದೊಡ್ಡದು. ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆ, ಗಾಳಿ ಹೆಚ್ಚಾಗಿರುವುದರಿಂದ ಹಾನಿಗಳು ಹೆಚ್ಚಾಗಿ ವಿದ್ಯುತ್ ಮಾರ್ಗ ನಿರ್ವಹಣೆ ನಿರಂತರವಾಗಿ ನಡೆಯುತ್ತಿರುತ್ತದೆ. ಆದರೆ ಇಲಾಖೆಯಲ್ಲಿ ಇವರನ್ನು ಕಾಯಂ ಕೆಲಸಗಾರನ್ನಾಗಿ ತೆಗೆದುಕೊಂಡಿಲ್ಲ. ಇದೇ ವಿಪರ್ಯಾಸ. ಹೊರಗುತ್ತಿಗೆಯಾಗಿ ಏಜೆನ್ಸಿ ಮೂಲಕ ಕೆಲಸ ಪಡೆಯುವ ಗ್ಯಾಂಗ್ ಮೆನ್ ಗಳಿಗೆ ಸೂಕ್ತ ವೇತನವೂ ಲಭ್ಯವಿಲ್ಲದಂತಾಗಿದೆ. ಆದ್ದರಿಂದ ಗ್ಯಾಂಗ್ ಮೆನ್ ಗಳನ್ನು ಇಲಾಖೆಯಲ್ಲಿ ಕಾಯಂ ಕೆಲಸಗಾರರಾಗಿ ನೇಮಿಸಬೇಕೆಂಬ ಒತ್ತಾಯಗಳು ಕೇಳಿಬಂದಿವೆ. ಆದರೆ ಆಡಳಿತ ವರ್ಗಕ್ಕೆ ವಿದ್ಯುತ್ ಮಾರ್ಗ ನಿರ್ವಹಣೆ ಮಾಡುವ ಈ ಗ್ಯಾಂಗ್ ಮೆನ್ ಗಳೆಂದರೆ ಯಾರು, ಅವರ ಕೆಲಸವೇನು ಎಂಬುದೇ ಗೊತ್ತಿಲ್ಲ. ಅಷ್ಟರ ಮಟ್ಟಿಗೆ ಇವರನ್ನು ನಿರ್ಲಕ್ಷ್ಯ ಮಾಡಲಾಗಿದೆ. ------------------------- “ಸುಮಾರು 12 ವರ್ಷಗಳಿಂದ ನಿರಂತರವಾಗಿ ಮೆಸ್ಕಾಂ ಶಾಖೆಯಲ್ಲಿ ಗ್ಯಾಂಗ್ ಮೆನ್ ಆಗಿ ಕೆಲಸ ಮಾಡುತ್ತಿದ್ದೇನೆ. ಗೋಣಿಬೀಡು ಭಾಗದಲ್ಲಿ ವರ್ಷಪೂರ್ತಿ ಕೆಲಸ ಮಾಡುತ್ತಿದ್ದೇನೆ. ನನ್ನಂತಹ ಅನೇಕ ಗ್ಯಾಂಗ್ ಮೆನ್ ಗಳನ್ನು ಕಾಯಂ ಗೊಳಿಸಬೇಕು ಎಂಬುದು ನನ್ನ ಆಗ್ರಹ” -ಚಂದ್ರಪ್ಪ ಕಿರುಗುಂದ, ಗ್ಯಾಂಗ್​​ಮನ್ --------------------------- “ಮೆಸ್ಕಾಂನಲ್ಲಿ ಸಿಬ್ಬಂದಿಗಳ ಕೊರತೆಯಿದೆ. ನಮ್ಮ ಎರಡು ಉಪವಿಭಾಗಕ್ಕೆ ಮಂಜೂರಾತಿ ಹುದ್ದೆ 140 ಇದ್ದರೆ, 40 ಸಿಬ್ಬಂದಿಗಳು ಮಾತ್ರ ಕೆಲಸ ಮಾಡುತ್ತಿದ್ದಾರೆ. 20 ಮಂದಿ ಗ್ಯಾಂಗ್ ಮೆನ್ ಗಳಿದ್ದಾರೆ. ಮಾನ್ಸೂನ್ ಗ್ಯಾಂಗ್ ಮೆನ್ ಗಳನು ಏಜೆನ್ಸಿಯೊಂದರ ಮೂಲಕ ಹೊರಗುತ್ತಿಗೆಯಲ್ಲಿ ಪಡೆಯಲಾಗುತ್ತಿದೆ. ಮಳೆಗಾಲಪೂರ್ವ ತಯಾರಿಗೆ ಅಗತ್ಯವಾಗಿ ಬೇಕಾದ ಸಲಕರಣೆಗಳನ್ನು ಸಂಗ್ರಹಿಸಲಾಗಿದೆ. ಲೈನ್ ಮೆನ್ ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಕೋವಿಡ್ ನಿಂದಾಗಿ ತಾತ್ಕಾಲಿಕ ತಡೆಯಾಗಿದೆ. ಲಾಕ್ಡೌನ್ ಮುಗಿದ ನಂತರ ನೇಮಕಾತಿ ನಡೆಯಲಿದೆ” -ಚಿದಾನಂದ್, ಮೆಸ್ಕಾಂ ಎಇಇ ------------------------- “ಕೆಲಸದ ಅವಧಿ ಹೆಚ್ಚಾಗಿದ್ದರೆ, ಜವಾಬ್ದಾರಿಯುತವಾಗಿದ್ದರೆ ಅಂತಹ ಕೆಲಸವನ್ನು ಕಾಯಂ ಗೊಳಿಸಲು ಅವಕಾಶವಿರುತ್ತದೆ. ಕೆಲವು ಬಾರಿ ತಾತ್ಕಾಲಿಕ ಕೆಲಸವೆಂದು ನೇಮಿಸಿ ಕೈಬಿಟ್ಟಿರುತ್ತಾರೆ. ಹೀಗಾಗಬಾರದು. ನಿರಂತರ ಕೆಲಸ ಮಾಡುತ್ತ ಬಂದವರನ್ನು ಕಾಯಂ ಗೊಳಿಸುವುದು ಬಹಳ ಒಳ್ಳೆಯದು. ವಿದ್ಯುತ್ ಮಾರ್ಗನಿರ್ವಹಣೆಯ ಗ್ಯಾಂಗ್ ಮೆನ್ ಕೆಲಸ ಜವಾಬ್ದಾರಿಯುತವಾದದ್ದು. ಇದನ್ನು ಕಾಯಂ ಗೊಳಿಸಲು ಸಂಬಂಧಿಸಿದವರ ಮತ್ತು ಸರ್ಕಾರದ ಗಮನಕ್ಕೆ ತರುತ್ತೇನೆ” -ಎಂ.ಪಿ.ಕುಮಾರಸ್ವಾಮಿ, ಶಾಸಕ