ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲಿ ಬಿತ್ತನೆ ಬೀಜಕ್ಕಾಗಿ ರೈತರು ಅಧಿಕಾರಿಗಳ ಮಧ್ಯೆ ಜಟಾಪಟಿ..!

ಬಾಗಲಕೋಟೆ: ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರ ಮುಧೋಳದಲ್ಲಿ ಬಿತ್ತನೆ ಬೀಜಕ್ಕಾಗಿ ಅಧಿಕಾರಿಗಳು ರೈತರ ಮಧ್ಯೆ ಜಟಾಪಟಿ ನಡೆದಿದೆ. ಜಿಲ್ಲೆಯ ಮುಧೋಳ ನಗರದಲ್ಲಿ ರೈತರು ಕಳೆದ ಎರಡುಮೂರು ದಿನಗಳಿಂದ ಬಿತ್ತನೆ ಬೀಜಕ್ಕಾಗಿ ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸುತ್ತಿದ್ದಾರೆ.
ಬಿತ್ತನೆ ಬೀಜಕ್ಕಾಗಿ ಮುಧೋಳ ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ರೈತರು ಅಲೆದಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಮುಧೋಳ ಭಾಗದಲ್ಲಿ ರೈತರು ಈಗ ಸೋಯಾ ಬೀಜ ಸಿಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಸೋಯಾ ಬೀಜ ಪರೀಕ್ಷೆ ಆಗದ ಹಿನ್ನಲೆ ವಿತರಣೆ ವಿಳಂಬವಾಗಿದೆ ಎನ್ನಲಾಗುತ್ತಿದೆ.
ಆದರೆ ಸೋಯಾ ಬಿತ್ತನೆಗೆ ಉತ್ತಮ ಮಳೆ ಆಗಿದ್ದು ರೈತರು ಬಿತ್ತನೆಗೆ ಮುಂದಾಗಿದ್ದಾರೆ. ಆದರೆ, ಬಿತ್ತನೆ ಬೀಜದ ಗುಣಮಟ್ಟ ಗ್ಯಾರಂಟಿ ಇಲ್ಲ. ಜೊತೆಗೆ ಕಳೆದ ವರ್ಷ ಸೋಯಾ ಬೀಜ ಗುಣಮಟ್ಟ ಸರಿ ಇಲ್ಲದ್ದರಿಂದ ಬಿತ್ತಿದರೂ ಬೆಳೆ ಬೆಳದಿರಲಿಲ್ಲ. ಈ ವರ್ಷವೂ ಅದೇ ಸ್ಥಿತಿ ಮರುಕಳಿಸಬಾರದು ಹಾಗಾಗಿ ಬೀಜ ವಿತರಣೆಗೆ ವಿಳಂಬವಾಗಿದೆ ಎಂದು ಕೃಷಿ ಅಧಿಕಾರಿಗಳ ಹೇಳುತ್ತಿದ್ದಾರೆ.
ಆದರೆ, ಬಿತ್ತನೆಗೆ ಉತ್ತಮ ಮಳೆ ಆಗಿದೆ, ಕೃಷಿ ಇಲಾಖೆ ಅಧಿಕಾರಿಗಳು ಬಿತ್ತನೆ ಬೀಜ ಸಂಗ್ರಹಣೆ ಮಾಡಬೇಕಾಗಿತ್ತು. ಈಗ ನಮಗೆ ಸಕಾಲಕ್ಕೆ ಬಿತ್ತನೆ ಬೀಜ ಸಿಗುತ್ತಿಲ್ಲ ಎನ್ನುತ್ತಾರೆ ರೈತರು.
ಇನ್ನು ಕೋವಿಡ್ ಲಾಕ್ ಡೌನ್ ಇರೋದ್ರಿಂದ 10 ಗಂಟೆಗೆ ಬೀಜ ವಿತರಣಾ ಕೇಂದ್ರ ಬಂದ್ ಆಗುತ್ತೆ. ಹಳ್ಳಿಯಿಂದ ಬರುವ ರೈತರಿಗೆ ಬೀಜ ಸಿಗದೇ ವಾಪಾಸ್ಸಾಗುವಂತಾಗಿದೆ. ಬಿತ್ತನೆ ಬೀಜ ವಿತರಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.