ಸಾಗರದ ಕೋವಿಡ್ ಪೀಡಿತ ವೃದ್ಧೆಗೆ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ: ಶೀಘ್ರ ಗುಣಮುಖ

ಕಾರವಾರ : ಕೋವಿಡ್ ಹಿನ್ನೆಲೆಯಲ್ಲಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಅಕ್ಕಪಕ್ಕದ ಜಿಲ್ಲೆಗಳಾದ ಶಿವಮೊಗ್ಗ ಹಾಗೂ ಹಾವೇರಿಗಳಿಂದ ರೋಗಿಗಳು ದಾಖಲಾಗಿ ಉತ್ತಮ ಚಿಕಿತ್ಸೆ ಪಡೆದು ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ.ಅತ್ತ ಭಟ್ಕಳ ಆಸ್ಪತ್ರೆಯ ಹೆಸರು ಕೆಡಿಸುವ ಸಾಗರದ ಖಾಸಗಿ ಆಸ್ಪತ್ರೆಯವರ ಹುನ್ನಾರವೀಗ ಬೆಳಕಿಗೆ ಬಂದಿದೆ.
ಈ ಮಧ್ಯೆ ಓರ್ವ ಸಾಗರ ಮೂಲದ ಕೋವಿಡ್ ದೃಢಪಟ್ಟ ವೃದ್ಧ ಮಹಿಳೆಯು 15 ದಿನಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದರು.ಅವರನ್ನು ಭಟ್ಕಳದ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಅವರು ಹೂಗುಚ್ಛ ನೀಡಿ ಬೀಳ್ಕೊಟ್ಟಿದ್ದರು.
ಮೇ,18 ರಂದು ಸಾಗರದಲ್ಲಿ 66 ವರ್ಷದ ವೃದ್ಧ ಮಹಿಳೆಗೆ ಕೋವಿಡ್ ದೃಢಪಟ್ಟು ಆಕೆಗೆ ತೀವ್ರ ಕೆಮ್ಮು,ಬಿ.ಪಿ.,ಶುಗರ್ ಇದ್ದ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಪಡೆದು ಆಕ್ಸಿಜನ್ ನೀಡಿದರೂ ಸಹ ಸ್ಯಾಚುರೇಶನ್ ಹಂತ ಇಳಿಮುಖವಾಗುತ್ತಿದ್ದ ಕಾರಣಕ್ಕೆ
ಭಯ ಭೀತರಾಗಿದ್ದರು. ಇದೇ ವೇಳೆ ಸಾಗರದಲ್ಲಿ ಅವರ ಪುತ್ರ ಗೆಳೆಯರ ಬಳಗದ ವಾಟ್ಸಾಪ್ ಗ್ರೂಪ್ ಮೂಲಕ ಭಟ್ಕಳ ಸರಕಾರಿ ಆಸ್ಪತ್ರೆಯ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾರೆ.
ಈ ಬಗ್ಗೆ ಸ್ನೇಹಿತರೋರ್ವರಿಂದ ಮಾಹಿತಿ ಕಲೆ ಹಾಕಿದ ವೃದ್ಧ ಮಹಿಳೆಯ ಪುತ್ರ ಫ್ರಾಕ್ಲೀನ್ ಎಂಬುವವರು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಸಹಿತ ಉತ್ತಮ ವ್ಯವಸ್ಥೆಯಿದ್ದು, ಯಾವುದೇ ಊರಿನ ರೋಗಿಗಳು ತೆರಳಿದರೂ ಸಹ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಾರೆ ಹಾಗೂ ತೆರಳಿದ ಎಲ್ಲ ರೋಗಿಗಳು ಆರೋಗ್ಯ ವಾಗಿ ಮನೆಗೆ ಬಂದಿರುವ ಬಗ್ಗೆ ದೃಢಪಡಿಸಿಕೊಂಡಿದ್ದರು.
ಕೋವಿಡ್ ದೃಢಪಟ್ಟ ವೃದ್ಧ ಮಹಿಳೆಗೆ ಸಾಗರದಿಂದ ಶಿವಮೊಗ್ಗ 70 ಕಿ.ಮೀ. ದೂರ ಆದರೆ ಭಟ್ಕಳ 120 ಕಿ.ಮೀ. ದೂರ ಆಗುತ್ತದೆ.
ಆದರೂ ಸಹ ಭಟ್ಕಳ ಸರಕಾರಿ ಆಸ್ಪತ್ರೆಯ ಉತ್ತಮ ಸೇವೆಯ ಮಾಹಿತಿಯ ಹಿನ್ನೆಲೆಯಲ್ಲಿ ವೃದ್ಧ ಮಹಿಳೆಯ ಪುತ್ರ ಫ್ರಾಕ್ಲೀನ್ ಅವರು ತಕ್ಷಣಕ್ಕೆ ಖಾಸಗಿ ಅಂಬ್ಯುಲೆನ್ಸ್ ಮಾಡಿಕೊಂಡು ನೇರವಾಗಿ ಮಾವಿನಗುಂಡಿ, ಹೊನ್ನಾವರ ಮಾರ್ಗವಾಗಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಬಂದಿದ್ದರು.
ಆಸ್ಪತ್ರೆಗೆ ಬಂದ ಕೋವಿಡ್ ದೃಢಪಟ್ಟ ಮಹಿಳೆಯನ್ನು ನೇರವಾಗಿ ದಾಖಲಿಸಿ ಚಿಕಿತ್ಸೆ ನೀಡಲು ಆರಂಭಿಸಿದ್ದ ಸರಕಾರಿ ಆಸ್ಪತ್ರೆಯ ವೈದ್ಯರು ತೀರಾ ಹದಗೆಟ್ಟ ಪರಿಸ್ಥಿತಿಯಲ್ಲಿ ಬಂದಿದ್ದ ವೃದ್ಧೆಯನ್ನು ದಿನದಿಂದ ದಿನಕ್ಕೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವಂತೆ ಚಿಕಿತ್ಸೆ ಮುಂದುವರೆಸಿದರು.ಈ ಮಧ್ಯೆ ದಾಖಲಾದ ವೃದ್ಧ ಮಹಿಳೆಗೆ ಊಟ ತಿಂಡಿ ಸಹಿತ ಔಷಧೋಪಚಾರಕ್ಕೆ ಕೊರತೆ ಆಗದಂತೆ ನೋಡಿಕೊಂಡಿದ್ದರು. ತಾಯಿಯ ಆರೋಗ್ಯದ ಹದಗೆಟ್ಟ ಪರಿಸ್ಥಿತಿಯಿಂದ ಕಂಗಾಲಾಗಿದ್ದ ವೃದ್ಧ ಮಹಿಳೆಯ ಪುತ್ರ ಫ್ರಾಕ್ಲೀನ್ ಅವರಿಗೂ ಸಹ
ಊಟ ತಿಂಡಿ ನೀಡಿ ಸಮರ್ಪಕವಾಗಿ ಉಪಚರಿಸಿದ್ದಾರೆ.
ಕೊನೆಯ ಹಂತ ತಲುಪಿದ್ದ ಸಾಗರ ಮೂಲದ 66 ವರ್ಷದ ವೃದ್ಧ ಮಹಿಳೆಯೂ ಸಂಪೂರ್ಣವಾಗಿ ಆರೋಗ್ಯ ಚೇತರಿಕೆ ಹೊಂದುವಂತೆ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಹಾಗೂ ಅವರ ವೈದ್ಯರ,ನರ್ಸಗಳ ತಂಡ ಕೆಲಸ ಮಾಡಿದೆ.ವೃದ್ಧ ಮಹಿಳೆಯ ಪುತ್ರ ಫ್ರಾಕ್ಲೀನ್ ಅವರು ವೈದ್ಯರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.
ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳಿವೆ. ಸ್ವಂತ ಊರಿನವರಂತೆ ಪರ ಊರು,ತಾಲೂಕಿನಿಂದ ಬರುವ ರೋಗಿಗಳನ್ನು ಉಪಚರಿಸಿ ಅವರಿಗೆ ಧೈರ್ಯ ತುಂಬಿ ಕೋವಿಡ್ ಹೋಗಲಾಡಿಸುವಂತಹ ಕೆಲಸ ಮಾಡುತ್ತಿದ್ದಾರೆ.ಸಾಗರ ತಾಲೂಕಿನಲ್ಲಿ ಕೋವಿಡ್ ರೋಗಿಗಳಿಗೆ ಯಾವುದೇ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ನಮಗೆ ಶಿವಮೊಗ್ಗಕ್ಕೆ ಹೋಗಬೇಕಾದ ಸ್ಥಿತಿ ಇದ್ದರೂ ಸಹ ಅಲ್ಲಿನ ಆಸ್ಪತ್ರೆಯ ಮೇಲೆ
ನಂಬಿಕೆಯಿಲ್ಲವಾಗಿತ್ತು.ಕಾರಣ ನೇರವಾಗಿ ಭಟ್ಕಳಕ್ಕೆ ಬಂದು 3 ದಿನಗಳ ಕಾಲ ಆಕ್ಸಿಜನ್ ರಹಿತವಾಗಿ ಚೇತರಿಕೆಯಿಂದ ತಾಯಿ ಇದ್ದರು. ಇದರಿಂದ ಭಟ್ಕಳ ಸರಕಾರಿ ಆಸ್ಪತ್ರೆಯ ಮೇಲೆ ನಂಬಿಕೆ ಹೆಚ್ಚಾಗಿದೆ. ನನ್ನ ತಾಯಿ ಬದುಕಿ ಬರಲು ಕಾರಣ ಭಟ್ಕಳ ಸರಕಾರಿ ಆಸ್ಪತ್ರೆಯಾಗಿದೆ ಎಂದು ಫ್ಲಾಕ್ಲೀನ್ ಕೃತಜ್ಞತೆಯಿಂದ ನುಡಿಯುತ್ತಾರೆ.
ಭಟ್ಕಳ ಮತ್ತು ಹೊರ ಜಿಲ್ಲೆಯಿಂದ ಭಟ್ಕಳ ಸರಕಾರಿ ಆಸ್ಪತ್ರೆಗೆ ಬರುವ ಕೋವಿಡ್ ರೋಗಿಗಳ ಅಥವಾ ಇನ್ಯಾವುದೇ ಕೋವಿಡ್ ರಹಿತ
ರೋಗಿಗಳ ದಾಖಲಾತಿ ಹೆಚ್ಚಿವೆ. ಇಲ್ಲಿ ಬರುವಂತಹ ರೋಗಿಗಳನ್ನು ವಾಪಸ್ಸು ಕಳುಹಿಸದೇ ಅವರಿಗೆ ಚಿಕಿತ್ಸೆ ನೀಡುವ ಕೆಲಸ ನಮ್ಮದಾಗಿದ್ದು, ಅದರಂತೆ ಸಾಗರದ 66 ವರ್ಷದ ವೃದ್ಧ ಮಹಿಳೆಯನ್ನು ದಾಖಲಿಸಿ ಚಿಕಿತ್ಸೆ ನೀಡಿದ್ದೇವೆ.ಸಂಪೂರ್ಣ ಕೊನೆಯ ಹಂತಕ್ಕೆ ತಲುಪಿದ್ದ ವೃದ್ಧ ಮಹಿಳೆಯೂ ಈಗ ಚೇತರಿಸಿಕೊಂಡು ಮನೆಗೆ ತೆರಳುತ್ತಿರುವುದು ನನಗೆ ಸಂತಸವಾಗಿದೆ.
ಅಂಬ್ಯುಲೆನ್ಸ್ ಚಾಲಕರ ಡೀಲಿಂಗ್ ಸುಳ್ಳು ವಧಂತಿ
ಕೋವಿಡ್ ಎರಡನೇ ಅಲೆ ಆರಂಭದಲ್ಲಿಯೇ ಭಟ್ಕಳ ಸರಕಾರಿ ಆಸ್ಪತ್ರೆಗೆ ಅತೀ ಹೆಚ್ಚಾಗಿ ಶಿವಮೊಗ್ಗ,ಸಾಗರ, ಸೊರಬದಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದರು.ಆದರೆ ಈ ನಡುವೆ ಕಳೆದ ಕೆಲ ದಿನಗಳ ಹಿಂದೆ ಅಂಬ್ಯುಲೆನ್ಸ್ ಚಾಲಕರು ಭಟ್ಕಳಕ್ಕೆ ಕರೆ ತರಲು ಹೆಚ್ಚಿನ ಹಣ ಪಡೆದು ರೋಗಿಗಳಿಂದ ಡೀಲಿಂಗ್ ಮಾಡಿಕೊಳ್ಳುತ್ತಿದ್ದ ಬಗ್ಗೆ ವದಂತಿಗಳು ಹಬ್ಬಿತ್ತು.ಇದರಿಂದ ಸರಕಾರಿ ಆಸ್ಪತ್ರೆಯ ಹೆಸರು ಹಾಳಾಗುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅವರು ಹೊರ ಜಿಲ್ಲೆಯ ರೋಗಿಗಳ ದಾಖಲೆಯನ್ನು ನಿಲ್ಲಿಸಿದ್ದರು. ಕಾರಣ ಹೊರ ಜಿಲ್ಲೆಯ ರೋಗಿಗಳನ್ನು ಭಟ್ಕಳದಲ್ಲಿ ದಾಖಲಿಸಿ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತ,ತಾಲೂಕಾಡಳಿತ ಸೂಚಿಸಿಲ್ಲದರ ಮಧ್ಯೆಯೂ ಸಹ ಆಸ್ಪತ್ರೆಯ ಹೆಸರು ಹಾಳಾಗಬಾರದು ಎಂಬ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿತ್ತು. ಇವೆಲ್ಲದರ ಮಧ್ಯೆ ಸಾಗರ ಶಿವಮೊಗ್ಗದಿಂದ ಸಾಕಷ್ಟು ದೂರವಾಣಿ ಕರೆಗಳು ಬರುತ್ತಿದ್ದು,ಇದಕ್ಕೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅವರು ಕರೆ ಮಾಡಿದವರಿಗೆ ನಡೆದ ಘಟನೆಯ ಬಗ್ಗೆ ವಿವರಿಸಿ ಭಟ್ಕಳ ತಾಲೂಕಾಸ್ಪತ್ರೆಯ ಬಗ್ಗೆ ಕೆಟ್ಟ ಹೆಸರು ಕೇಳಿ ಬರುತ್ತಿದ್ದು, ಈ ಬಗ್ಗೆ ನಿಮ್ಮ ಜಿಲ್ಲೆಯಿಂದ ಸರಿಯಾದ ನೈಜ ಸಂಗತಿ ತನಿಖೆ ಮಾಡಿದ ಬಳಿಕವಷ್ಟೇ ದಾಖಲೆ ಮಾಡಿಕೊಳ್ಳಲಿದ್ದೇನೆಂದು ತಿಳಿಸಿದರು.
ಸಾಕಷ್ಟು ದಿನಗಳ ಕಾಲ ಶಿವಮೊಗ್ಗ,ಸಾಗರ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಾವಿರಕ್ಕೂ ಅಧಿಕ ಹಣ ವ್ಯಯ ಮಾಡಿದರೂ ಸಹ ರೋಗಿಗಳು ಗುಣಮುಖ ರಾಗದ ಹಿನ್ನೆಲೆಯಲ್ಲಿ ರೋಗಿಗಳ ಕುಟುಂಬಸ್ಥರಲ್ಲಿ ನೇರವಾಗಿ ಭಟ್ಕಳ ಸರಕಾರಿ ಆಸ್ಪತ್ರೆಯ ಉತ್ತಮ ಸೇವೆಯನ್ನು ತಿಳಿದು ಅಲ್ಲಿಂದ ಡಿಸ್ ಚಾರ್ಜ್ ಮಾಡಿಸಿ ಭಟ್ಕಳಕ್ಕೆ ಬರುತ್ತಿದ್ದದ್ದನ್ನು ಗಮನಿಸಿದ ಕೆಲ ಖಾಸಗಿ ಆಸ್ಪತ್ರೆಯವರು ಭಟ್ಕಳ ಸರಕಾರಿ ಆಸ್ಪತ್ರೆಯ ಮೇಲೆ ವಕ್ರದೃಷ್ಟಿ ಬೀರುವಂತ ದುಸ್ಸಾಹಸಕ್ಕೆ ಕೈಹಾಕಿರುವುದು ಬೆಳಕಿಗೆ ಬಂದಿದೆ.ಇವೆಲ್ಲವೂ ಖಾಸಗಿ ಆಸ್ಪತ್ರೆಯ ಲಾಭಿಯಾಗಿದ್ದು,ಈ ಬಗ್ಗೆ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಎಲ್ಲ ಶಿವಮೊಗ್ಗ, ಸಾಗರ ಭಾಗದ ರೋಗಿಗಳಿಗೆ ಅಂಬ್ಯುಲೆನ್ಸ ಚಾಲಕರು ಪಡೆದುಕೊಳ್ಳುವ ಹಣದ ಬಗ್ಗೆ ಭಟ್ಕಳ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅವರು ಮಾಹಿತಿ ಪಡೆದುಕೊಂಡಿದ್ದು, ಅವರಿಂದಲೂ ಅಂಬ್ಯುಲೆನ್ಸ ಚಾಲಕರು ಯಾವುದೇ ಹೆಚ್ಚಿನ ಹಣ ಪಡೆದುಕೊಳ್ಳುತ್ತಿಲ್ಲ ಎಂಬುದು ಸಾಬೀತಾದ ಬಳಿಕ ಈಗ ಮತ್ತೆ ಹೊರ ಜಿಲ್ಲೆಯ ರೋಗಿಗಳ ದಾಖಲಾತಿ ಆರಂಭಿಸಿದ್ದಾರೆ.