ದಕ್ಷಿಣ ಕನ್ನಡಮೆಟ್ರೋ

ಕಾಸರಗೋಡು, ಮಂಜೇಶ್ವರದಲ್ಲಿನ ಕನ್ನಡ ಹೆಸರುಗಳ ಬದಲಾವಣೆ ಬೇಡ; ಕೇರಳ ಸರ್ಕಾರಕ್ಕೆ ಪತ್ರ ಬರೆಯಲು ಸಿಎಂ ನಿರ್ಧಾರ

ಬೆಂಗಳೂರು: ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಕಾಸರಗೋಡು ಮತ್ತು ಮಂಜೇಶ್ವರದಲ್ಲಿನ ಕನ್ನಡ ಹೆಸರುಗಳನ್ನು ಹೊಂದಿದ ಕೆಲವು ಗ್ರಾಮಗಳ ಹೆಸರುಗಳನ್ನು ಮಲಯಾಳೀ ಭಾಷೆಯ ಆಧಾರದ ಹೆಸರುಗಳನ್ನಾಗಿ ಬದಲಾಯಿಸಲು ಹೊರಟಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ವಿಷಯವು ತಮ್ಮ ಗಮನಕ್ಕೆ ಈಗಾಗಲೇ ಬಂದಿದ್ದು, ಕೂಡಲೇ ಕೇರಳ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಕಾಸರಗೋಡು ಮತ್ತು ಮಂಜೇಶ್ವರ ಭಾಗದಲ್ಲಿ ಕನ್ನಡಿಗರು ಮತ್ತು ಮಲಯಾಳ ಭಾಷಿಗರು ಪರಸ್ಪರ ಸಹಬಾಳ್ವೆಯಿಂದ ಸಹೋದರರಂತೆ ಬದುಕನ್ನು ನಿರ್ವಹಿಸುತ್ತಿದ್ದು, ಕನ್ನಡ ಭಾಷೆಯ ಸಾಂಸ್ಕೃತಿಕ, ಐತಿಹಾಸಿಕ ಮಹತ್ವವುಳ್ಳ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವುದು ಸೂಕ್ತವಲ್ಲ ಎಂಬ ವಿಷಯವನ್ನು ಕೇರಳ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಗ್ರಾಮಗಳ ಹೆಸರುಗಳ ಬದಲಾವಣೆಯ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಕೋರಿ ಪತ್ರ ಬರೆಯುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಪ್ರಯತ್ನ ಕೇರಳ ಸರ್ಕಾರದ ಗಮನಕ್ಕೆ ಬಾರದೆಯೇ ಕೇವಲ ಸ್ಥಳೀಯ ಸಂಸ್ಥೆಗಳ ಹಂತದಲ್ಲಿಯೇ ನಡೆದಿರಬಹುದೆಂಬ ವಿಷಯವನ್ನು ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

Spread the love

Related Articles

Leave a Reply

Your email address will not be published. Required fields are marked *

Back to top button