ಉತ್ತರ ಕನ್ನಡ: ಜಿಲ್ಲೆಯ ವಿವಿಧೆಡೆ ಡಿ.ಸಿ ಭೇಟಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ಮಳೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಹ ಸಾಮಾನ್ಯವಾದಂತಿದೆ. ಅದರಲ್ಲೂ ಹೊನ್ನಾವರ ತಾಲೂಕಿನ ಬಡಗಣಿ,ಭಾಸ್ಕೇರಿ ಹಾಗೂ ಗುಂಡಬಾಳ ನದಿಗಳಲ್ಲಿ ಪ್ರತಿ ವರ್ಷ ಪ್ರವಾಹ ಕಾಣಿಸಿಕೊಳ್ಳುತ್ತಿದೆ. ಲಿಂಗನಮಕ್ಕಿ ಆಣೆಕಟ್ಟಿನ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿ ಅಣೆಕಟ್ಟು ಭರ್ತಿಯಾದಲ್ಲಿ ಶರಾವತಿ ನದಿಯಲ್ಲೂ ಕೂಡಾ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರವಾಹ ಬಂದ ನಂತರದ ಪರಿಹಾರ ಕಾರ್ಯಗಳಿಗಿಂತ ಮೊದಲೇ ಮುನ್ನೆಚ್ಚರಿಕಾ ಕ್ರಮಗಳು ಕೈಗೊಂಡರೆ ಉತ್ತಮ ಎಂಬಂತೆ ಇಂದು ಹೊನ್ನಾವರ ತಾಲೂಕಿನ ಬಡಗಣಿ,ಭಾಸ್ಕೇರಿ, ಗುಂಡಬಾಳ ಹಾಗೂ ಶರಾವತಿ ನದಿಗಳ ಪ್ರವಾಹದಿಂದ ಬಾಧಿತವಾಗುವ ಗ್ರಾಮಗಳಿಗೆ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಅಧಿಕಾರಿಗ ಳೊಂದಿಗೆ ಭೇಟಿ ನೀಡಿದರು.
ಪ್ರವಾಹದಿಂದ ಜನರು ಅನುಭವಿಸುವ ಸಂಕಟ ಹಾಗೂ ಇದಕ್ಕೆ ಶಾಶ್ವತ ಪರಿಹಾರಗಳ ಕುರಿತಂತೆ ಸ್ಥಳೀಯರಿಂದಲೇ ಮಾಹಿತಿ ಹಾಗೂ ಸಲಹೆಗಳನ್ನು ಪಡೆಯಲಾಯಿತು.ಅಲ್ಲದೇ ಸ್ಥಳೀಯ ಮಾಧ್ಯಮದವರಿಂದಲೂ ಕೂಡಾ ಸಲಹೆಗಳನ್ನು ಪಡೆಯಲಾಯಿತು.
ನಂತರ ಭಟ್ಕಳ ಸಹಾಯಕ ಕಮೀಷನರ್ ಕಛೇರಿಯಲ್ಲಿ ಪ್ರವಾಹ ಮುನ್ನೆಚ್ಚರಿಕೆ ಹಾಗೂ ಶಾಶ್ವತ ಪರಿಹಾರ ಕಾರ್ಯಗಳ ಕುರಿತಂತೆ ಶಾಸಕರಾದ ಸುನೀಲ್ ನಾಯ್ಕ,ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ ಜಿಲ್ಲಾಧಿಕಾರಿಗಳು ಪ್ರವಾಹದ ಕುರಿತಾದ ಮುನ್ನೆಚ್ಚರಿಕಾ ಕಾರ್ಯಕ್ಕೆ ಸೂಚನೆ ನೀಡಿದರು.