ಬಿಪಿಎಲ್ ಕಾರ್ಡ್ದಾರರಿಗೆ ಧನಸಹಾಯಕ್ಕೆ ಕೃಷ್ಣಭೈರೇಗೌಡ ಒತ್ತಾಯ

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯ ಕುಂದಾಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಕೊರೊನಾ ಕೇರ್ ಸೆಂಟರ್ಗೆ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆರೋಗ್ಯ ಸಂಬಂಧಿತ ಪರಿಕರಗಳನ್ನು ಮಾಚಿ ಸಚಿವ ಕೃಷ್ಣ ಬೈರೆಗೌಡ ವಿತರಿಸಿದರು.
ಕೊರೊನಾ ಎರಡನೇ ಅಲೆಯ ಲಾಕ್ಡೌನ್ ಅವಧಿಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಆರ್ಥಿಕ ಪರಿಹಾರ ಪ್ಯಾಕೇಜ್ ಯಾವುದೇ ರೀತಿಯಲ್ಲಿ ಜನೋಪಯೋಗಿಯಾಗಿಲ್ಲ. ಇದು ಕೇವಲ ಕಣ್ಣೊರೆಸುವ ತಂತ್ರ ಎಂದು ಆರೋಪಿಸಿದ ಕೃಷ್ಣ ಬೈರೆಗೌಡ, ಲಾಕ್ ಡೌನ್ ಸಡಿಲಿಕೆ ಮಾಡಲು ತಜ್ಞರ ಜೊತೆ ಸಮಾಲೋಚಿಸಿ ಸಮರ್ಪಕವಾದ ರೀತಿಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಸೂಕ್ತವಾದ ತೀರ್ಮಾನ ಕೈಗೊಳ್ಳಬೇಕು. ಬಿಪಿಎಲ್ ಪಡಿತರ ಚೀಟಿ ಹೊಂದಿರುವವರ ಪ್ರತಿಯೊಬ್ಬರ ಖಾತೆಗೆ 10 ಸಾವಿರ ರೂಪಾಯಿ ಪರಿಹಾರದ ಹಣ ಸರ್ಕಾರ ನೇರವಾಗಿ ವರ್ಗಾವಣೆ ಮಾಡಬೇಕು. ಎಂದು ಅಭಿಪ್ರಾಯ ಪಟ್ಟರು.
ಕೊರೋನ ಸಂಕಷ್ಟ ಕಾಲದಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿ ಜನರ ನೆರವಿಗೆ ಬಂದಿರುವುದು ನ್ಯಾಯಾಲಯ. ಸರ್ಕಾರ ಕಿವುಡಾಗಿರುವ ಈ ಸಂದರ್ಭದಲ್ಲಿ ನ್ಯಾಯಾಂಗ ಮಧ್ಯ ಪ್ರವೇಶಿಸಿ ಜನರ ನೋವಿಗೆ ಸ್ಪಂದಿಸಿದೆ ಮತ್ತು ಮಾಧ್ಯಮಗಳು ಆಸ್ಪತ್ರೆಗಳಲ್ಲಿ, ಸ್ಮಶಾನಗಳಲ್ಲಿ, ರಸ್ತೆಗಳಲ್ಲಿ, ಆ್ಯಂಬುಲೆನ್ಸ್ ಗಳಲ್ಲಿ ಜನರ ನೋವಿನ ವಿಚಾರಗಳನ್ನು ಬೆಳಕಿಗೆ ತಂದಿವೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಎಸ್ ರವಿ ತಿಳಿಸಿದರು
ಕಳೆದ ಹತ್ತು ದಿನಗಳಿಂದ ಬಡವರು ನಿರ್ಗತಿಕರು ಹಸಿವಿನಿಂದ ಬಳಲ ಬಾರದು ಎಂದು ದೇವನಹಳ್ಳಿ ತಾಲೂಕಿನಾದ್ಯಂತ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅನ್ನ ದಾಸೋಹ ಕಾರ್ಯಕ್ರಮ ನಡೆಯುತ್ತಿದೆ. ಲಾಕ್ ಡೌನ್ ಮುಗಿಯುವವರೆಗೆ ಇದು ನಡೆಯಲಿದೆ ಎಂದು ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಎ ಸಿ ಶ್ರೀನಿವಾಸ್ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ , ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ ಸಿ ಮಂಜುನಾಥ, ಯೂತ್ ಕಾಂಗ್ರೆಸ್ ಅಧ್ಯಕ್ಷ ನಾಗೆಶ್, ಕುಂದಾಣ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣ ಸ್ವಾಮಿ ಮತ್ತು ಆರೋಗ್ಯ ಕೇಂದ್ರದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.